ಬೆಂಗಳೂರು : ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯ ನಂತರ ಉಂಟಾದ ಕೋಲಾಹಲದ ನಡುವೆ, ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಪರಿಶೀಲಿಸಲು ನಿಯಮಗಳನ್ನು ತರಲು ಕರ್ನಾಟಕ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ.
ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಚಟುವಟಿಕೆಗಳು ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ .
“ನಾವು ತರಲು ಬಯಸುವ ನಿಯಮಗಳು ಸಾರ್ವಜನಿಕ ಸ್ಥಳಗಳು, ಸರ್ಕಾರಿ ಶಾಲೆಗಳು, ಕಾಲೇಜುಗಳು, ಸರ್ಕಾರಿ ಆವರಣಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಅನುದಾನಿತ ಸಂಸ್ಥೆಗಳಿಗೆ ಸಂಬಂಧಿಸಿವೆ. ಹೊಸ ನಿಯಮವನ್ನು ರೂಪಿಸಲು ನಾವು ಗೃಹ ಇಲಾಖೆ, ಕಾನೂನು ಇಲಾಖೆ ಮತ್ತು ಶಿಕ್ಷಣ ಇಲಾಖೆ ಹೊರಡಿಸಿದ ಹಿಂದಿನ ಆದೇಶಗಳನ್ನು ಒಟ್ಟುಗೂಡಿಸುತ್ತೇವೆ. ಮುಂದಿನ ಎರಡು ಮೂರು ದಿನಗಳಲ್ಲಿ, ಹೊಸ ನಿಯಮವು ಕಾನೂನು ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಜಾರಿಗೆ ಬರಲಿದೆ, ”ಎಂದು ಸಚಿವರು ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ತಮಿಳುನಾಡು ಸರ್ಕಾರ ಕೈಗೊಂಡಿರುವ ನಿರ್ಧಾರದಂತೆ ಖಾಸಗಿ ಸಂಸ್ಥೆಗಳು, ಸಂಘಟನೆಗಳು ಚಟುವಟಿಕೆಗಳನ್ನ ನಡೆಸಲು ಪೂರ್ವಾನುಮತಿ ಕಡ್ಡಾಯ ಮಾಡಿ ಹೊಸ ನಿಯಮ ತರಲು ಮುಂದಾಗಿದ್ದು, ತನ್ನ ತೀರ್ಮಾನದಲ್ಲಿ ಎಲ್ಲಿಯೂ ಆರ್‌ಎಸ್‌ಎಸ್ ಪದ ಬಳಕೆ ಮಾಡದೇ ಸರ್ಕಾರ ಖಾಸಗಿ ಸಂಸ್ಥೆಗಳು ಎಂದು ಉಲ್ಲೇಖಿಸಿ ಜಾಣ್ಮೆ ನಡೆ ಅನುಸರಿಸಿದೆ.
ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹಾಕುವಂತೆ ಸಚಿವ ಪ್ರಿಯಾಂಕ್ ಖರ್ಗೆ ಬರೆದಿದ್ದ ಪತ್ರಕ್ಕೆ ಸರ್ಕಾರ ಸ್ಪಂದಿಸಿದ್ದು, ಖಾಸಗಿ ಸಘ ಸಂಸ್ಥೆಗಳು ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನು ಬದ್ದವಾಗಿ ನಡೆಸಲು ಪೂರ್ವಾ ಅನುಮತಿ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಇಂದು (ಅಕ್ಟೋಬರ್ 16) ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ RSS ಹೆಸರು ಉಲ್ಲೇಖ ಮಾಡದೆ ಅದರ ಕಾರ್ಯ ಚಟುವಿಟಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.
ಈ ನಿಯಮ ಜಾರಿಯಾದರೆ ಆರ್‌ಎಸ್‌ಎಸ್ ಮಾತ್ರವಲ್ಲ ಖಾಸಗಿ ಸಂಘ ಸಂಸ್ಥೆಗಳು / ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಕಡಿವಾಣ ಬೀಳಲಿದೆ. ಯಾರೇ ಯಾವುದೇ ಕಾರ್ಯಕ್ರಮ ಮಾಡುವುದಾದರೂ ಅನುಮತಿ ಪಡೆಯಬೇಕಾಗುತ್ತದೆ. ಇನ್ನು ಕ್ಯಾಬಿನೆಟ್ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನ ಮಾಡಲು ಅನುಮತಿ ಪಡೆಯಬೇಕು .ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಯಾವುದೇ ಸಂಘಟನೆಗಳು ,ಧರ್ಮದವರು ಅನುಮತಿ ಪಡೆಯಲೇಬೇಕು. ಈ ಸಂಬಂಧ ಹೊಸ ನಿಯಮಗಳನ್ನು ಕಾನೂನಾತ್ಮಕವಾಗಿ ಜಾರಿ ತರಲಾಗುವುದು. ಕಾನೂನು ನಮಗೂ, ನಿಮಗೂ, ಎಲ್ಲರಿಗೂ ಒಂದೇ. ಅನುಮತಿ ಪಡೆದು ಕಾರ್ಯಕ್ರಮ ಮಾಡಲು ಏನು ತೊಂದರೆ. ಯಾವುದೇ ತೊಂದರೆ ಆಗೋದಿಲ್ಲ ಎಂದರೆ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ಕೊಡುತ್ತಾರೆ ಎಂದರು.