ಬೆಂಗಳೂರು : ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಡ್ವೋಕೇಟ್ ಜನರಲ್ ಅವರಿಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.
ನ್ಯಾಯಾಂಗ ನಿಂದನೆ ಹಿನ್ನೆಲೆ ಯಲ್ಲಿ ಸಚಿವ ಜಮೀರ್ ವಿರುದ್ಧ ಪ್ರಕ್ರಿಯೆ ಆರಂಭಿ ಸುವ ಕುರಿತು ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸುವಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಅಡ್ವೋಕೇಟ್ ಜನರಲ್ ಅವರಿಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದ ಮೂವರು ಅರ್ಜಿದಾರರಲ್ಲಿ ಟಿಜೆ ಅಬ್ರಾಹಂ ಸಹ ಒಬ್ಬರು. ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶವನ್ನು ಜಮೀರ್ ರಾಜಕೀಯ ತೀರ್ಪು ಎಂದು ಕರೆದಿದ್ದಾರೆ ಎಂದು ಅಬ್ರಹಾಂ ಆರೋಪಿಸಿದ್ದರು. ಇದಕ್ಕೆ ಅಬ್ರಹಾಂ ಅವರು ಮತ್ತೆ ರಾಜ್ಯಪಾಲ ರನ್ನು ಭೇಟಿ ಮಾಡಿ, ಜಮೀರ್ ಅವರು ಬಹಿ ರಂಗವಾಗಿ ಪೊಲಿಟಿಕಲ್ ಜಡ್ಜ್ಮೆಂಟ್ ಎಂದು ಹೇಳಿರುವ ವಿಷಯವನ್ನು ಗಮನಕ್ಕೆ ತಂದಿದ್ದರಲ್ಲದೆ, ದೂರನ್ನೂ ಸಹ ನೀಡಿದ್ದರು. ಅಬ್ರಾಹಂ ನೀಡಿದ ದೂರಿನ ಹಿನ್ನಲೆಯಲ್ಲಿ ರಾಜ್ಯಪಾಲರು ಅಡ್ವೋಕೇಟ್ ಜನರಲ್ ಗೆ ಪತ್ರ ಬರೆದು, ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಮುಡಾ ಕೇಸ್ ನಲ್ಲಿ ತಮ್ಮ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಕೊಟ್ಟಿದ್ದ ಅನುಮತಿಯನ್ನು ಪ್ರಶ್ನಿಸಿ, ಸಿಎಂ ಸಿದ್ದರಾಮಯ್ಯನವರು ಹೈಕೋರ್ಟ್ ಮೊರೆ ಹೋಗಿದ್ದರು. ಸಿದ್ದರಾಮಯ್ಯನವರ ಅರ್ಜಿಯನ್ನು ತಳ್ಳಿಹಾಕಿದ ಹೈಕೋರ್ಟ್, ರಾಜ್ಯಪಾಲರ ನಡೆ ಸರಿಯಾಗಿದೆ ಎಂದು ಹೇಳಿತ್ತು.