ಬೆಂಗಳೂರು : ಶಾಲೆ ಆಯ್ತು ಈಗ ರಾಜಭವನದ ಸರದಿ ಮತ್ತೊಮ್ಮೆ ಬೆಂಗಳೂರು ಸುದ್ದಿಯಾಗಿದ್ದು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದೆ. ಪೊಲೀಸರು ತಕ್ಷಣ ರಾಜಭವನದಲ್ಲಿ ಪರಿಶೀಲನೆ ನಡೆಸಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಗೊತ್ತಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಧಾನಸೌಧ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಅಪರಿಚಿತರು ಸೋಮವಾರ ರಾಜ ಭವನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಕರೆ ಮಾಡಿದ್ದಾರೆ. ರಾಜ ಭವನ ಭದ್ರತಾ ಅಧಿಕಾರಿಗಳು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಧಾವಿಸಿದ್ದಾರೆ. ಹಲವು ಗಂಟೆಗಳ ಕಾಲ ಪರಿಶೀಲಿಸಿದ ಬಳಿಕ, ಇದು ಹುಸಿ ಬಾಂಬ್ ಕರೆ ಎಂದು ತಿಳಿದಬಂದಿದೆ.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಸೂಚನೆಯಂತೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಬಾಂಬ್ ಬೆದರಿಕೆ ಪ್ರಕರಣ ಸಂಬಂಧ ಎಫ್ಐಆರ್ಗಳು ದಾಖಲಾಗಿವೆ.