ಬೆಂಗಳೂರು : ವಿಧಾನಸೌಧದ ಆವರಣದಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ದೇಶದ್ರೋಹಿಗಳನ್ನು ಬಂಧಿಸಿದ್ದಾರೆ .ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು ಸೋಮವಾರ ಮೂವರನ್ನು ಬಂಧಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಬಗ್ಗೆ ಸ್ವಯಂ ಪ್ರೇರಿತವಾಗಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು, ಈಗ ದೆಹಲಿ ಮೂಲದ ಇಲ್ತಾಜ್, ಆರ್.ಟಿ. ನಗರ ಮೂಲದ ಮುನಾವರ್ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಅವರನ್ನು ಬಂಧಿಸಿದ್ದಾರೆ. ಸದ್ಯ ಈ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಬಳಿಕ ನ್ಯಾಯಾಲಕ್ಕೆ ಹಾಜರುಪಡಿಸಲಿದ್ದಾರೆ. ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಕೂಗಿದ ಆರೋಪ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
7 ಮಂದಿ ವಿಚಾರಣೆ ಮಾಡಲಾಗಿತ್ತು, ಮೂವರ ವಾಯ್ಸ್ ಸ್ಯಾಂಪಲ್ಸ್ಗಳನ್ನ ಎಫ್ಎಸ್ಎಲ್ಗೆ ರವಾನೆ ಮಾಡಲಾಗಿತ್ತು. ಮೆಲುಧ್ವನಿ, ಏರುಧ್ವನಿ ಮಾದರಿಯಲ್ಲಿ ಸ್ಯಾಂಪಲ್ಸ್ಗಳನ್ನ ಸಂಗ್ರಹಿಸಲಾಗಿದ್ದು, ಎಫ್ಎಸ್ಎಲ್ ತಂಡ ಪರಿಶೀಲನೆ ಮಾಡಿದೆ. ಘಟನೆ ನಡೆದ ದೃಶ್ಯಗಳನ್ನು ಸಹ ರವಾನಿಸಲಾಗಿತ್ತು.FSL ವರದಿ, ಸಾಂದರ್ಭಿಕ ಸಾಕ್ಷ್ಯಗಳು, ಆರೋಪಿಗಳ ಹೇಳಿಕೆ ಹಾಗೂ ತನಿಖೆ ವೇಳೆ ಸಿಕ್ಕ ಸಾಕ್ಷ್ಯಗಳ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದೇವೆ. ಸದ್ಯ ಆರೋಪಿಗಳನ್ನು ಬಂಧಿಸಿದ್ದು ವೈದ್ಯಕೀಯ ಪರೀಕ್ಷೆ ನಡೀತಾ ಇದೆ. ವೈದ್ಯಕೀಯ ಪರೀಕ್ಷೆ ಬಳಿಕ ಕೋರಮಂಗಲದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ಬಳಿಕ ಕಸ್ಟಡಿಗೆ ಪಡೆಯಲಿದ್ದಾರೆ.


