ಬೆಂಗಳೂರು : ವಿದೇಶದಲ್ಲಿ ಉದ್ಯೋಗದ ವೀಸಾ ಮಾಡಿಸಿಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ದಂಪತಿಯನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಕ್ಲೇನ್ ಸುಲ್ತಾನ್ ಹಾಗೂ ನಿಖಾತ್ ಸುಲ್ತಾನ್ ಬಂಧಿತರು. ಆರೋಪಿಗಳಿಂದ 66 ಲಕ್ಷ ರೂ.ನಗದು, ತಲಾ 2 ಕಾರು, ದ್ವಿಚಕ್ರ ವಾಹನಗಳು, 24 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ನಿಖಾತ್ ಸುಲ್ತಾನ್‌ಗೆ ಈ ಹಿಂದೆ ಬೆಂಗಳೂರಿನ ರೇಸ್ ಕೋರ್ಸ್ನಲ್ಲಿ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾಗ ವಿದೇಶಿ ಮೂಲದ ಜಾಕಿಯೊಬ್ಬನ ಪರಿಚಯವಾಗಿರುತ್ತದೆ. ವಿದೇಶಗಳಲ್ಲಿ ಹಾರ್ಸ್ ಜಾಕಿ ಮತ್ತು ಇತರ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ವೀಸಾ ಮಾಡಿಸಿಕೊಡುತ್ತೇನೆ. ಆಸಕ್ತರನ್ನು ಪರಿಚಯಿಸಿದರೆ ಒಂದು ವೀಸಾಗೆ ೫೦ ಸಾವಿರ ರೂ. ಕಮಿಷನ್ ಹಣ ನೀಡುವುದಾಗಿ ತಿಳಿಸಿದ್ದ.
ವಿದೇಶಿ ಜಾಕಿಯ ಆಫರ್ ಒಪ್ಪಿದ್ದ ಆರೋಪಿ ದಂಪತಿ ವಿದೇಶಗಳಲ್ಲಿ ಹಾರ್ಸ್ ಜಾಕಿಯಾಗಲು ಬಯಸುವವರಿಗೆ ವೀಸಾ ಮಾಡಿಸಿಕೊಡುವುದಾಗಿ ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿತ್ತು. ಅದರಂತೆ ಆರೋಪಿಗಳನ್ನು ಸಂಪರ್ಕಿಸಿದ್ದ ವ್ಯಕ್ತಿಯೊಬ್ಬರಿಗೆ ಆರಂಭದಲ್ಲಿ ಎರಡು ವೀಸಾಗಳನ್ನು ಮಾಡಿಸಿಕೊಟ್ಟು ನಂಬಿಕೆಗಳಿಸಿದ್ದರು. ನಂತರ ಒಟ್ಟು 51 ಜನರಿಗೆ ವೀಸಾ ಮಾಡಿಸಿಕೊಡುವುದಾಗಿ ಒಟ್ಟು 6.64 ಕೋಟಿ ಹಣವನ್ನು ಪಡೆದುಕೊಂಡಿದ್ದರು. ಆದರೆ. ವೀಸಾ ಮಾಡಿಸಿಕೊಡದೇ ಆ ಹಣದಲ್ಲಿ ಶ್ರೀಲಂಕಾ, ದುಬೈ, ಗೋವಾ, ಊಟಿ ಇನ್ನಿತರ ಕಡೆಗಳಲ್ಲಿ ಸುತ್ತಾಡಿ ವಿಲಾಸಿ ಜೀವನ ನಡೆಸಿದ್ದರು. ವೀಸಾ ಕುರಿತು ಕೇಳಿದಾಗ ನಕಲಿ ವೀಸಾ ದಾಖಲೆಗಳನ್ನು ನೀಡಿದ್ದರು. ದಾಖಲೆಗಳು ನಕಲಿ ಎಂದು ತಿಳಿದಾಗ ವೀಸಾ ಮಾಡಿಸಿಕೊಡಲು ಮಧ್ಯಸ್ಥಿಕೆ ವಹಿಸಿದ್ದ ವ್ಯಕ್ತಿ ಜ. 24ರಂದು ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.