ಬೆಂಗಳೂರು ; ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುತ್ತಿದ್ದಂತೆ ಒಂದೊಂದು ಹಗರಣಗಳು ಬಯಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನವಾಗುವ ನಿರೀಕ್ಷೆ ಇದ್ದು, ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಿರಿಯ ಅಧಿಕಾರಿಗಳು ಮಾಡಿದ 187 ಕೋಟಿ ರೂ. ಹಗರಣಕ್ಕೆ ಹೆದರಿ ನಿಷ್ಠಾವಂತ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಅಧಿಕಾರಿ ಬರೆದಿಟ್ಟ ಡೆತ್‌ನೋಟ್‌ನಲ್ಲಿ ಎರಡೆರಡು ಬಾರಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶಿವಿದೆ ಎಂದು ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಅಧಿಕಾರಿ ಸಾವಿನ ಹೊಣೆಹೊತ್ತು ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು. ಜೊತೆಗೆ ಈ ಪ್ರಕರಣವನ್ನು ಸಿಐಡಿ ಬದಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಎಸ್‌ಟಿ ನಿಗಮದ ಅಧಿಕಾರಿಯ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿದ್ದು ಹಾಗೂ ಇನ್ನಿತರ ಸಂಪುಟ ಸಚಿವರು ಮುಖ್ಯಮಂತ್ರಿ ಯವರಿಗೆ ಒತ್ತಡ ತರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಾವಿನ ವಿಚಾರದಲ್ಲಿ ಈಶ್ವರಪ್ಪನವರದ್ದೇನು ಕೂಡ ತಪ್ಪಿರಲಿಲ್ಲ. ಆದರೂ, ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಶ್ವರಪ್ಪ ಅವರ ವಿಚಾರದಲ್ಲಿ ವಿಪಕ್ಷನಾಯಕರಿದ್ದ ಸಿದ್ದರಾಮಯ್ಯನವರು ಮಾಡಿದ ರೋಷಾವೇಶ ಈಗ ಯಾಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ ರಾಜ್ಯದಿಂದ 150 ಕೋಟಿ ರೂಪಾಯಿ ಆಂಧ್ರ ಪ್ರದೇಶಕ್ಕೆ ರವಾನೆಯಾಗಿದೆ ಈ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಶಿವಮೊಗ್ಗದಲ್ಲಿ ಹೇಳಿದ್ದಾರೆ. ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿದ್ದು, ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಡ ಹಾಕಲಾಗಿತ್ತು ಆದರಿಂದ ಸಚಿವ ಬಿ. ನಾಗೇಂದ್ರ ಅವರು ಇಂದು ರಾತ್ರಿ ವೇಳೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.