ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ನಟ ದರ್ಶನ್‌ಗೆ ರಿಲೀಫ್ ಸಿಕ್ಕಿದೆ. ಬೆನ್ನುನೋವಿನ ಕಾರಣ ಹೇಳಿ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದ ದರ್ಶನ್ ತೂಗುದೀಪ ಮನವಿಯನ್ನು ಕೋರ್ಟ್ ಪುರಸ್ಕರಿಸಿದ್ದು, ಜಾಮೀನು ಮಂಜೂರುಮಾಡಿದೆ. ದೀಪಾವಳಿ ಹಬ್ಬಕ್ಕೆ ದರ್ಶನ್‌ಗೆ ಬಿಗ್ ಗಿಫ್ಟ್ ಸಿಕ್ಕಿದ್ದು 140 ದಿನಗಳ ಬಳಿಕ ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟ ದರ್ಶನ್‌ಗೆ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಕರ್ನಾಟಕ ಹೈಕೋರ್ಟ್ ಆರು ವಾರಗಳ ಅವಧಿ ಅಂದರೆ 45 ದಿನಗಳ ಕಾಲದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆ ಮೂಲಕ ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿ ದಿನ ದೂಡುತ್ತಿದ್ದ ನಟ ದರ್ಶನ್‌ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ನಟ ದರ್ಶನ್ ಗೆ ನೀಡಲಾಗಿರುವ ಮಧ್ಯಂತರ ಜಾಮೀನಿಗೆ ಹೈಕೋರ್ಟ್ ಸಾಕಷ್ಟು ಷರತ್ತುಗಳನ್ನು ವಿಧಿಸಿದೆ. ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು, ‘ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ ಇದೀಗ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ. ಆದರೆ ಆರು ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿದೆ. ಜಾಮೀನು ಪಡೆದ ಬಳಿಕ ಒಂದು ವಾರದಲ್ಲಿ ನಟ ದರ್ಶನ್ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ವಿವರವನ್ನು ಕೋರ್ಟ್ ಗೆ ನೀಡಬೇಕು ಎಂದು ಹೇಳಿದೆ.ಅಲ್ಲದೆ ದರ್ಶನ್ ಪಾಸ್ಪೋರ್ಟ್ ಅನ್ನು ಕೋರ್ಟ್ ಸುಪರ್ಧಿಗೆ ನೀಡಬೇಕು ಎಂದು ಹೇಳಿದೆ.
ನಟ ದರ್ಶನ್ ಮಧ್ಯಂತರ ಜಾಮೀನು ಮಂಜೂರು ಸಿಕ್ಕಿದ ಬೆನ್ನಲ್ಲಿಯೇ ಬಳ್ಳಾರಿ ಜೈಲು ಮುಂಭಾಗ ಆತನ ಅಭಿಮಾನಿಗಳು ಕೂಡ ಸೇರುತ್ತಿದ್ದಾರೆ.ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್, ನಟ ದನ್ವೀರ್ ಹಾಗೂ ಆಪ್ತರು ಜೈಲಿನ ಬಳಿ ಬರುವ ನಿರೀಕ್ಷೆ ಇದೆ. ಜಾಮೀನು ನಿರೀಕ್ಷೆಯಲ್ಲಿರುವ ದರ್ಶನ್ ಕುಟುಂಬಸ್ಥರಿಗೆ ಇದರಿಂದ ನೆಮ್ಮದಿಯಾಗಿದ. ಬಳ್ಳಾರಿಯ ಕಪಗಲ್ ರಸ್ತೆ ಆಪ್ತರ ಮನೆಯಲ್ಲಿ ದರ್ಶನ್ ಕುಟುಂಬದವರು ತಂಗಿದ್ದಾರೆ. ಈಗಾಗಲೇ ಜೈಲಾಧಿಕಾರಿಗಳೊಂದಿಗೆ ಕುಟುಂಬಸ್ಥರು ಮಾತನಾಡಿದ್ದಾರೆ. ಜಾಮೀನಿಗೆ ಸಂಬಂಧಿಸಿದ ಕೆಲ ಪ್ರಕ್ರಿಯೆ ಮುಗಿದ ಬಳಿಕ ದರ್ಶಣ್ ಹೊರಬರಲಿದ್ದಾರೆ.