ಬೆಂಗಳೂರು : ಕುಂದಲಹಳ್ಳಿ ಬ್ರೂಕ್‌ಫೀಲ್ಡ್ ಬಳಿಯ `ದಿ ರಾಮೇಶ್ವರಂ ಕೆಫೆ’ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮುಜಮಿಲ್ ಶರೀಫ್(34)ನನ್ನು ನ್ಯಾಯಾಲಯ ಏಳು ದಿನ ಎನ್‌ಐಎ ವಶಕ್ಕೆ ನೀಡಿದೆ.
ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದ ಕೆಫೆ ಸ್ಫೋಟದ ತನಿಖೆಯನ್ನು ಕೈಗೊಂಡಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬರೋಬ್ಬರಿ 27 ದಿನಗಳ ಬಳಿಕ ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಮುಜಮಿಲ್‌ನನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಒಪ್ಪಿಸಿದೆ.
ವಿಧ್ವಂಸಕ ಕೃತ್ಯಕ್ಕೆ ಬಳಿಸಿದ್ದ ಬಾಂಬ್ ಮತ್ತು ಅದರ ತಯಾರಿಕೆಗೆ ಬಳಸಿದ್ದ ರಸಾಯನಿಕ ವಸ್ತು ಸೇರಿದಂತೆ ಇತರ ಮಾಹಿತಿಗಳ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಏಳುದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿ ಆದೇಶ ಮಾಡಿದೆ. ಮಾರ್ಚ್ 1 ರಂದು ಕೆಫೆಯಲ್ಲಿ ಟೈಮರ್ ಬಾಂಬ್ ಸ್ಫೋಟಿಸಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಎನ್‌ಐಎ ಕೊನೆಗೂ ಯಶಸ್ವಿಯಾಗಿದೆ.
ರಾಜ್ಯ ಸೇರಿ ನೆರೆಯ ಆಂಧ್ರಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ಗೋವಾ ಸೇರಿದಂತೆ ಇತರ ಕಡೆಗಳಲ್ಲಿ ನಿರಂತರ ಹುಡುಕಾಟ ನಡೆಸಿದ್ದರು. ವಿವಿಧ ವಿಭಾಗದ ಅಧಿಕಾರಿಗಳ ೮ ತಂಡ ರಚನೆ ಮಾಡಿ ಶಂಕಿತರ ಹುಡುಕಾಟಕ್ಕೆ ಶೋಧ ನಡೆಸಿದ್ದರು. ಸದ್ಯ ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಮುಜಮೀಲ್ ಶರೀಫ್‌ನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತನಿಂದ ಮಹತ್ವದ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೆಫೆ ಸ್ಫೋಟದ ಉದ್ದೇಶ, ಆರೋಪಿಯ ಹಿಂದಿರುವ ಭಯೋತ್ಪಾದನಾ ಸಂಘಟನೆಗಳ ಮಾಹಿತಿ ಹಾಗೂ ಮಂಗಳೂರು ಕುಕ್ಕರ್ ಸ್ಫೋಟ, ಶಿವಮೊಗ್ಗದಲ್ಲಿ ಕಚ್ಚಾ ಬಾಂಬ್ ಪರೀಕ್ಷಾರ್ಥ ಟ್ರಯಲ್ ಬ್ಲಾಸ್ಟ್ ಸೇರಿದಂತೆ ಟೈಮರ್ ಬಾಂಬ್ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳು ಸೇರಿದಂತೆ ಇತರೆ ಮಾಹಿತಿಯನ್ನು ಆರೋಪಿಯಿಂದ ಎನ್‌ಐಎ ಅಧಿಕಾರಿಗಳು ಪಡೆಯುತ್ತಿದ್ದಾರೆ.
ಬಂಧಿಸಿದ್ದು ಹೇಗೆ? ಮಾ 27 ರಂದು ಶಿವಮೊಗ್ಗ, ಚಿಕ್ಕಮಗಳೂರು, ತೀರ್ಥಹಳ್ಳಿ ಸೇರಿ ತಮಿಳುನಾಡು, ಉತ್ತರ ಪ್ರದೇಶದ ಕೆಲವು ಕಡೆಗಳಲ್ಲಿ ಏಕಕಾಲಕ್ಕೆ ಎನ್‌ಐಎ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಮುಜಮಿಲ್ ಶರೀಫ್‌ನ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಮುಜಮಿಲ್‌ನನ್ನು ವಶಕ್ಕೆ ಪಡೆದಿದ್ದಾರೆ. ಮುಜಮಿಲ್ ಶರೀಫ್‌ನ ಸಹಚರನಾಗಿದ್ದ ಅಬ್ದುಲ್ ಮಥೀನ್ ಅಹ್ಮದ್ ತಾಹ ನಾಲ್ಕು ವರ್ಷಗಳಿಂದ ಪರಾರಿಯಾಗದ್ದನು. ಈಗ ಕೆಫೆ ಸ್ಫೋಟದಲ್ಲಿ ಅಬ್ದುಲ್ ಮಥೀನ್ ಹಾಗೂ ಮುಸಾವೀರ್ ಹುಸೇನ್ ಶಾಜೀದ್ ಕೈವಾಡವಿರುವುದನ್ನು ಎನ್‌ಐಎ ಪತ್ತೆ ಮಾಡಿದೆ.
ಬಂಧಿತ ಮುಜಮಿಲ್ ಶರೀಫ್ ನೀಡುವ ಮಾಹಿತಿ ಮೇರೆಗೆ ಈ ಇಬ್ಬರು ಕುಖ್ಯಾತರನ್ನು ಎನ್‌ಐಎ ಪತ್ತೆ ಮಾಡಲಿದೆ.