ಬೆಂಗಳೂರು : ತಮಿಳುನಾಡು ಮತ್ತು ಬೆಂಗಳೂರು ಸೇರಿದಂತೆ ಇತರ ರಾಜ್ಯಗಳಲ್ಲಿ ದಾಳಿಗಳು ಎನ್ಐಎ ನಡೆಸಿದೆ.ಈ ಸ್ಥಳಗಳಲ್ಲಿನ ಕಾರಾಗೃಹದ ಕೈದಿಗಳು ಭಯೋತ್ಪಾದಕ ಸಂಚಿನಲ್ಲಿ ಭಾಗಿಯಾಗಿರುವ ಶಂಕಿತರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ ಚೆನ್ನೈಯಲ್ಲಿ ಹಲವು ಕಡೆ ದಾಳಿ ನಡೆಸಿ ಐವರನ್ನು ಬಂಧಿಸಿದೆ.
ಎನ್ಐಎ ಅಧಿಕಾರಿಗಳು ನಿನ್ನೆ ರಾತ್ರಿ 8 ಗಂಟೆಗೆ ಪರಪ್ಪನ ಅಗ್ರಹಾರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಳಗಿನ ಜಾವ 6 ಗಂಟೆವರೆಗು ತನಿಖೆ ನಡೆಸಿದ್ದು, ನಜೀರ್ ಸೇರಿದಂತೆ ಅನೇಕರ ವಿಚಾರಣೆ ನಡೆಸಿದ್ದಾರೆ. ಚೆನ್ನೈನ ಸಿದ್ದಾಯಳ್ ಪೇಟೆ ಮತ್ತು ಬಿಡಾರಿಯಾರ್ ಟೆಂಪಲ್ ಬಳಿ ಎನ್ಐಎ ಕೆಲವು ಮನೆಗಳಿಗೆ ದಾಳಿ ಮಾಡಿ ಐವರನ್ನು ವಶಕ್ಕೆ ಪಡೆದು ಈಗ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದೆ.
ಚೆನ್ನೈನಲ್ಲಿ ವಶಕ್ಕೆ ಪಡೆದವರಲ್ಲಿ ಕೆಲವರು ಬೆಂಗಳೂರಿನ ಆರ್.ಟಿ ನಗರ ನಿವಾಸಿ, ಕುಖ್ಯಾತ ಭಯೋತ್ಪಾದಕ ನಝೀರ್ ಎಂಬಾತನ ಜತೆ ಸಂಪರ್ಕ ಹೊಂದಿದವರಾಗಿದ್ದಾರೆ.ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕೀಲಕಾರೈ ಏರಿಯಾ ಬಳಿ ಇರುವ ಸಂಶುದ್ದೀನ್ ಎಂಬಾತನ ಮನೆ ಮೇಲೆ ದಾಳಿ ಮಾಡಲಾಗಿದೆ.
ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಜೀರ್ ಒಬ್ಬ ಕುಖ್ಯಾತ ಭಯೋತ್ಪಾದಕನಾಗಿದ್ದು, ಜೈಲಿನಲ್ಲಿ ಇರುತ್ತಲೇ ತನ್ನ ಷಡ್ಯಂತ್ರಗಳನ್ನು ರೂಪಿಸುತ್ತಾನೆ. ಯಾವುದೋ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಜೈಲು ಸೇರುವ ಮುಸ್ಲಿಂ ಯುವಕರನ್ನು ತನ್ನೆಡೆಗೆ ಸೆಳೆದುಕೊಂಡು ಅವರ ಬ್ರೇನ್ ವಾಷ್ ಮಾಡಿ ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಉಗ್ರ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮಾಡುವುದು ಈತನ ಗೇಮ್ ಪ್ಲ್ಯಾನ್ ಎಂದು ತಿಳಿದುಬಂದಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎನ್ಐಎ ಸ್ಪೋಟ ಪ್ರಕರಣದ ಬಳಿಕ ಚೆನ್ನೈನಲ್ಲಿರುವ ತನ್ನ ಪೇಯ್ಡ್ ಇನ್ಪಾರ್ಮರ್ ಗಳನ್ನು ಅಲರ್ಟ್ ಮಾಡಿತ್ತು. ಅವರು ನೀಡಿದ ಮಾಹಿತಿಯ ಮೇರೆಗೆ ಚೆನ್ನೈಯಲ್ಲಿ ಐವರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಏಳು ಆರೋಪಿಗಳ ವಶದಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಹ್ಯಾಂಡ್ ಗ್ರೆನೇಡ್ಗಳು ಮತ್ತು ವಾಕಿ-ಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.


