ಬೆಂಗಳೂರು : ಪೆಟ್ರೋಲ್, ಡಿಸೇಲ್, ಹಾಲು, ವಿದ್ಯುತ್, ತರಕಾರಿ, ದಿನಸಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ದರ ಏರಿಕೆಯ ಮಧ್ಯದಲ್ಲಿಯೇ ಇದೀಗ ಸರ್ಕಾರ ಮದ್ಯದ ದರವನ್ನೂ ಹೆಚ್ಚಿಸಲು ಮುಂದಾಗಿದೆ. ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ ಮೂರನೇ ಬಾರಿ ಮದ್ಯದ ಬೆಲೆ ಏರಿಸಿದಂತಾಗಿದೆ. ಮದ್ಯದ ಬೆಲೆ ಏರಿಕೆಯಿಂದಾಗಿ ಈಗಾಗಲೇ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ಅದರಲ್ಲೂ ಬಿಯರ್ ಮಾರಾಟ ಕುಸಿದಿದೆ. ಮದ್ಯ ಮಾರಾಟ ಕಂಪನಿಗಳು ಯಾವುದೇ ಕಾರಣಕ್ಕೂ ಬೆಲೆ ಏರಿಕೆ ಮಾಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ಹಣಕಾಸು ಅನಿವಾರ್ಯತೆಗೆ ಬಿದ್ದಿರುವ ಸರ್ಕಾರ ಮದ್ಯಪ್ರಿಯರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ನೀಡಿದೆ. ಈ ಬಾರಿ ಬಜೆಟ್‌ನಲ್ಲಿ ಮದ್ಯದ ಬೆಲೆಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಆದರೆ ಇದೀಗ ಏಕಾಏಕಿ ಮತ್ತೆ ಮದ್ಯಗಳ ಬೆಲೆ ಏರಿಕೆಗೆ ಕೈಹಾಕಿದೆ.
ಇದೀಗ ಕರ್ನಾಟಕದಲ್ಲಿ ಮದ್ಯದ ಮೇಲೆ ಬೆಲೆ ಏರಿಕೆ ಮಾಡುವುದಕ್ಕೆ ಸದ್ದಿಲ್ಲದೆ ಸಿದ್ಧತೆ ಶುರುವಾಗಿದೆ. ಮದ್ಯದ ಬೆಲೆಯನ್ನು ಪ್ರತಿ ತ್ರೈ ಮಾಸಿಕಕ್ಕೆ (ಪ್ರತಿ ಮೂರು ತಿಂಗಳು) 10 ರೂ.ಗಳಿಂದ 15 ರೂ.ಗಳಿಗೆ ಹಾಗೂ ಬಿಯರ್ ಬೆಲೆಯನ್ನು ಈಗಿರುವ ಬೆಲೆಗಿಂತ ಶೇ.10 ರಷ್ಟು ಹೆಚ್ಚಳ ಮಾಡಲು ಭರ್ಜರಿ ಸಿದ್ಧತೆ ಶುರುವಾಗಿದೆ. ಈ ಕುರಿತು ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಇದು ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದ್ದು, ಹೊಸ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಜನರಿಂದ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ 7 ದಿನ ಕಾಲಾವಕಾಶ ಕೊಟ್ಟಿದೆ. ಸರ್ಕಾರದ ಹೊಸ ಅಧಿಸೂಚನೆಯ ಅನ್ವಯ, ವಿಸ್ಕಿ, ಜಿನ್ ಹಾಗೂ ರಮ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಏರಿಕೆಯಾಗಲಿದೆ. ಈ ಮದ್ಯದ ಬೆಲೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ 10 ರೂಪಾಯಿ ಯಿಂದ 15 ರೂಪಾಯಿ ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಇದರಲ್ಲಿ ಬಿಯರ್, ಟಾಡಿ ಹಾಗೂ ವೈನ್ ಮದ್ಯಗಳನ್ನು ಸೇರಿಸಿಲ್ಲ ಎಂದು ತಿಳಿದುಬಂದಿದೆ.