ಬೆಂಗಳೂರು : ರಾಜ್ಯ ಬಿಜೆಪಿಯ ಬಣ ಬಡಿದಾಟ ಹಾದಿ- ಬೀದಿ ರಂಪವಾಗಿರುವ ಬೆಳವಣಿಗೆಗಳ
ನಡುವೆಯೇ ಎಲ್ಲದಕ್ಕೂ ಮದ್ದು ಅರೆಯಲು ಬಿಜೆಪಿ ಹೈಕಮಾಂಡ್ ಕೊನೆಗೂ ಮನಸ್ಸು ಮಾಡಿದ್ದು, ಬಣ ಬಡಿದಾಟ ಅಂತ್ಯಗೊಳಿಸಲು ಕೇಂದ್ರದಿಂದ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ಕಳುಹಿಸಲು ಹೈಕಮಾಂಡ್ ಮುಂದಾಗಿದೆ.
ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟಜೋರಾಗಿ ಆಂತರಿಕ ಸಂಘರ್ಷಮುಗಿಲು ಮುಟ್ಟಿರುವ ಬೆಳವಣಿಗೆಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಅಸಮಾಧಾನಗೊಂಡಿದ್ದು , ವಾಸ್ತವ ಏನು ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಇಬ್ಬರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿಗೆ ರಾಜ್ಯಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನ್‌ದಾಸ್ ಅವರನ್ನು ಪಕ್ಷದ ಹೈಕಮಾಂಡ್ ರಾಜ್ಯಕ್ಕೆ ಕಳುಹಿಸುತ್ತಿದ್ದು, ಬಣ ಬಡಿದಾಟಕ್ಕೆ ಕಾರಣವಾಗಿರುವ ಅಂಶಗಳು, ವಾಸ್ತವ ಸ್ಥಿತಿ ಏನಿದೆ ಎಲ್ಲದರ ಬಗ್ಗೆಯೂ ಎಲ್ಲ ಪ್ರಮುಖ ನಾಯಕರುಗಳ ಜತೆ ಚರ್ಚಿಸಿ ವರದಿ ನೀಡುವಂತೆ ಈ ಇಬ್ಬರು ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ.
ಹೈಕಮಾಂಡ್‌ನ ಸೂಚನೆಯಂತೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್ ಹಾಗೂ ರಾಧಮೋಹನ್‌ದಾಸ್ ಅವರು ಡಿ. ೩ ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಬಿಜೆಪಿಯ ಪ್ರಮುಖ ನಾಯಕರುಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುವರು. ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯಕ್ಕೆ ಬರುತ್ತಿರುವ ಇಬ್ಬರು ಪ್ರಧಾನ ಕಾರ್ಯದರ್ಶಿಗಳಿಗೆ ಎಲ್ಲ ಮಾಹಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಡಿ. ೩ ರಂದು ಬಿಜೆಪಿಯ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿದೆ.
ಈ ಕೋರ್ ಕಮಿಟಿ ಸಭೆಯಲ್ಲಿ ಉಪಸ್ಥಿತರಿರುವ ಇಬ್ಬರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಪ್ರಮುಖ ನಾಯಕರುಗಳಿಂದ ಬಣ ಬಡಿದಾಟದ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ವಸ್ತುಸ್ಥಿತಿಯ ಸಂಪೂರ್ಣ ವರದಿಯನ್ನು ಹೈಕಮಾಂಡ್‌ಗೆ ನೀಡುವರು ಎಂದು ಬಿಜೆಪಿ ಮೂಲಗಳು ಹೇಳಿವೆ.
ರಾಜ್ಯ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಜೋರಾಗಿ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಭಿನ್ನ ನಾಯಕರು ಸಮರ ಸಾರಿ ಪ್ರತ್ಯೇಕವಾಗಿಯೇ ವಕ್ಫ್ ವಿರುದ್ಧ ಅಭಿಯಾನವನ್ನು ನಡೆಸಿದ್ದಾರೆ. ಇದು ಬಿಜೆಪಿಯಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿತ್ತು. ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಿಷ್ಠ ನಾಯಕರುಗಳು ನಿನ್ನೆಯಷ್ಟೇ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ದು ಅವರ ನಿವಾಸದಲ್ಲಿ ಸಭೆ ಸೇರಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡಿದ್ದರು. ಜತೆಗೆ ಭಿನ್ನರಿಗೆ ಸಡ್ಡು ಹೊಡೆದು ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನು ನಡೆಸಲು ಮುಂದಾಗಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಅವರ ಸುತ್ತಲಿನ ನಾಯಕರುಗಳ ವಿರುದ್ಧ
ಅಸಮಾಧಾನಗೊಂಡಿರುವ ಬಿಜೆಪಿಯ ಭಿನ್ನ ನಾಯಕರುಗಳು ಸಹ ಹೈಕಮಾಂಡ್‌ಗೆ ತಮ್ಮ ಅಹವಾಲನ್ನು ಆಲಿಸಬೇಕು, ರಾಜ್ಯದಲ್ಲಿ ಪದಾಧಿಕಾರಿಗಳ ಬದಲಾವಣೆಯಾಗಬೇಕು ಎಂಬ ಮನವಿಯನ್ನು ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ, ಬಿಜೆಪಿ ಒಡೆದ ಮನೆಯಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದವು.
ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯದಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತಿದೆ. ಕೂಡಲೇ ಇದಕ್ಕೆ ಅಂತ್ಯ ಹಾಡಿ ಎಂಬ ಪಕ್ಷನಿಷ್ಠ ಕೆಲ ಹಿರಿಯರ ಸಲಹೆ ಮೇರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಬ್ಬರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನು ರಾಜ್ಯಕ್ಕೆ ಕಳುಹಿಸಿ ಎಲ್ಲದಕ್ಕೂ ಅಂತ್ಯ ಹಾಡಲು ಮುಂದಾಗಿದ್ದಾರೆ.
ಬರುವ ಡಿಸೆಂಬರ್ ೩ ಮತ್ತು ೪ ರಂದು ಎರಡು ದಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್ ಮತ್ತು ರಾಧಾ ಮೋಹನ್ ದಾಸ್ ಇಬ್ಬರೂ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡುವರು, ಕೋರ್ ಕಂಮಿಟಿ ಸಭೆಯಲ್ಲೂ ಭಾಗಿಯಾಗುವರು. ನಂತರ ಶಾಸಕರು, ಮಾಜಿ ಸಚಿವರು ಹಾಗೂ ಪ್ರಮುಖ ನಾಯಕರುಗಳನ್ನೆಲ್ಲ ಭೇಟಿ ಮಾಡಿ ಅವರ ಜತೆ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.
ರಾಜ್ಯಕ್ಕೆ ಆಗಮಿಸುವ ಕೇಂದ್ರ ನಾಯಕರುಗಳು ಡಿ. 3 ಮತ್ತು 4 ರಂದು ಎಲ್ಲರ ಜತೆ ಸಮಾಲೋಚನೆ ನಡೆಸಿ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳಲ್ಲಿನ ವರದಿ ನೀಡಿ ಬಣ ಬಡಿದಾಟಕ್ಕೆ ಬ್ರೇ ಹಾಕಲು ಏನೆಲ್ಲಾ ಮಾಡಬೇಕು ಎಂಬ ಬಗ್ಗೆಯೂ ವರದಿಯಲ್ಲಿ ಹೇಳುವರು ಎಂದು ಹೇಳಲಾಗಿದೆ.