ಬೆಂಗಳೂರು: ರಾಜ್ಯದ ವಸತಿ ಶಾಲೆಗಳಲ್ಲಿ ಹಾಕಲಾಗಿದ್ದ ಘೋಷವಾಕ್ಯ ಬದಲಾವಣೆ ಮಾಡುವ ಆದೇಶ ವಿಧಾನಮಂಡಲದ ಉಭಯ ಸದನದಗಳ ಒಳಗೆ ಹಾಗೂ ಹೊರಗೆ ಭಾರಿ ಚರ್ಚೆ ಮತ್ತು ವಿವಾದ ಸೃಷ್ಟಿಸಿದೆ. ‘ಜ್ಞಾನ ದೇಗುಲವಿದು ಕೈ ಮುಗಿದು ಬಾ’ ಎಂಬ ರಾಷ್ಟ್ರಕವಿ ಕುವೆಂಪು ಅವರ ಉಕ್ತಿಯನ್ನು ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾವಣೆ ಮಾಡಲಾಗಿದೆ.
ಇದು ಬಿಜೆಪಿ ಕಾಂಗ್ರೆಸ್ ಮುಖಂಡರ ನಡುವೆ ರಾಜಕೀಯ ವಾಕ್ ಸಮರಕ್ಕೆ ನಾಂದಿಯಾಗಿದ್ದು, ಈ ಪ್ರಕರಣದಿಂದ ಸರ್ಕಾರ ಪೇಚಿಗೆ ಸಿಲುಕಿದರೆ, ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಿದೆ. ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ವಿಷಯ ಪ್ರಸ್ತಾಪಿಸಿದರು. ‘ಜ್ಞಾನ ದೇಗುಲವಿದು ಕೈ ಮುಗಿದು ಬಾ’ ಎನ್ನುವ ಘೋಷವಾಕ್ಯ ಬದಲಿಸಿದ್ದು ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದಾದೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಮಧ್ಯೆ ವಾಕ್ಸಮರ ಶುರುವಾಯಿತು. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನಬಂದಂತೆ ಆದೇಶ ಮಾಡಿದ್ದಾರೆ ಎಂದು ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಮಾತಿನಿಂದ ಸಿಟ್ಟಾದ ಸಚಿವ ಕೃಷ್ಣ ಬೈರೇಗೌಡ ಅವರು, “ಕುವೆಂಪು ಕುರಿತ ಪಠ್ಯವನ್ನೇ ಕಿತ್ತು ಹಾಕಿದವರು ನೀವು, ನಮಗೆ ಹೇಳ್ತೀರಾ” ಎಂದು ಮರು ಪ್ರಶ್ನಿಸಿದರು. ಈ ವೇಳೆ ಗದ್ದಲ ಜೋರಾಗುತ್ತಿದ್ದಂತೆ ಶೂನ್ಯ ವೇಳೆಯಲ್ಲಿ ಚರ್ಚೆ ಬೇಡ ಎಂದ ಸ್ಪೀಕರ್ ಖಾದರ್ ಮನವಿ ಮಾಡಿದರು. ಈ ಸರ್ಕಾರದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಮಾತಿಗೆ ಮತ್ತೊಮ್ಮೆ ವಾಗ್ವಾದಕ್ಕೆ ನಡೆಯಿತು.
‘ಜ್ಞಾನ ದೇಗುಲವಿದುಧೈರ್ಯವಾಗಿ ಪ್ರಶ್ನಿಸಿ' ಎನ್ನುವ ಬರಹದ ಆದೇಶ ನೀಡಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಆಗಬೇಕು ಎಂದು ಪಟ್ಟು ಹಿಡಿದ ಬಿಜೆಪಿ ಈ ಹಿಂದಿನಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಘೋಷ ವಾಕ್ಯ ಮತ್ತೆ ಬರೆಯಿಸಬೇಕು ಇಲ್ಲದಿದ್ದರೆ ಮುಂದಾಗುವ ಪರಿಣಾಮಗಳನ್ನು ಸರ್ಕಾರ ಎದುರಿಸಬೇಕಿದೆ ಎಂದು ಎಚ್ಚರಿಕೆ ನೀಡಿದೆ. ಸರ್ಕಾರ ಈ ಬಗ್ಗೆ ಉತ್ತರ ನೀಡಲಿದೆ ಎಂದು ಸಭಾಧ್ಯಕ್ಷರು ತಿಳಿಸಿ ವಿಷಯಕ್ಕೆ ತೆರೆ ಎಳೆದರು.
ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಹಲವು ವರ್ಷಗಳಿಂದ ಇದ್ದ ‘ಜ್ಞಾನ ದೇಗುವವಿದು ಕೈ ಮುಗಿದು ಒಳಗೆ ಬನ್ನಿ’ ಎಂದಿದ್ದ ಕುವೆಂಪು ಘೋಷವಾಕ್ಯವನ್ನು ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಿಸಲಾಗಿದೆ.
ವಸತಿ ಶಾಲೆಗಳ ಶಿಕ್ಷಕರ ಟೆಲಿಗ್ರಾಂ ಗ್ರೂಪ್ ಸೃಷ್ಟಿಸಿ ಅದರಲ್ಲಿ ಸಮಾಜಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರಿಂದ ಘೋಷವಾಕ್ಯ ಬದಲಾವಣೆಗೆ ಮೌಖಿಕವಾಗಿ ಸೂಚಿಸಲಾಗಿದ್ದು, ಅದರಂತೆ ರಾಯಚೂರು, ಬೀದರ್, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳ ವಸತಿ ಶಾಲೆಗಳಲ್ಲಿ ಹಳೆದ ಬೋರ್ಡ್ ಬದಲಿಸಿ ‘ಧೈರ್ಯವಾಗಿ ಪ್ರಶ್ನಿಸಿ’ ಎನ್ನುವ ಹೊಸ ಫಲಕ ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ಎರಡೂ ಹೊಸಘೋಷವಾಕ್ಯ ಉಳಿಸಿಕೊಳ್ಳಲಾಗಿದೆ. ಇದಲ್ಲದೆ ಕೆಲವು ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ ಇಲಾಖೆ ಉನ್ನತಾಧಿಕಾರಿಗಳೇ ಕರೆ ಮಾಡಿ ಘೋಷವಾಕ್ಯ ಬದಲಿಸುವಂತೆ ತಾಕೀತು ಮಾಡಿರುವ ಕಾರಣಕ್ಕೆ ಹಳೆಯ ಘೋಷವಾಕ್ಯದ ಸ್ಥಳದಲ್ಲಿ ಧೈರ್ಯವಾಗಿ ಪ್ರಶ್ನಿಸಿ ಎನ್ನುವ ಹೊಸ ಬರಹ ಕಾಣಿಸಿಕೊಂಡಿದೆ.
ರಾಜ್ಯದಲ್ಲಿರುವ ಏಕಲವ್ಯ, ರಾಣಿಚೆನ್ನಮ್ಮ ಸೇರಿದಂತೆ 833 ವಸತಿ ಶಾಲೆಗಳಲ್ಲಿ ಈ ಬದಲಾವಣೆ ನಡೆಯಬೇಕಿದ್ದು ಈಗಾಗಲೇ 119 ಶಾಲೆಗಳು ಹೊಸಫಲಕ ಅಳವಡಿಸಿವೆ. ಸಮಾಜಕಲ್ಯಾಣ ಸಚಿವರು ನಾವು ಕುವೆಂಪು ಸಾಹಿತ್ಯ ಬದಲಿಸಿಲ್ಲ ಬರಹವನ್ನಷ್ಟೇ ಎಂದು ಬದಲಾವಣೆಯನ್ನು ಸಮರ್ಥಿಸಿಕೊಂಡಿರುವ ಹಿನ್ನೆಲೆಯಲ್ಲಿ ಘೋಷವಾಕ್ಯ ಬದಲಾವಣೆ ಅನಿವಾರ್ಯವಾಗಲಿದೆ. ಪ್ರತಿಪಕ್ಷಗಳ ಒತ್ತಡಕ್ಕೆ ಸರ್ಕಾರ ಮಣಿದರೆ ಮುಂದಿನ ನಿರ್ಧಾರವನ್ನು ಕಾದುನೋಡಬೇಕಿದೆ. ಅಷ್ಟಕ್ಕೂ ಈ ಘೋಷವಾಕ್ಯ ಬದಲಿಸುವುದು ಯಾರ ಐಡಿಯಾ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.


