ಬೆಂಗಳೂರು ; ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಇನ್ನೆರಡು ದಿನವೂ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 38 ಡಿಗ್ರಿ ಸೆಲ್ಸಿಯಸ್ ಮತ್ತು 23 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.
ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ,ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯದ ಬಹುತೇಕ ಕಡೆ ಇದೇ ರೀತಿಯ ಪರಿಸ್ಥಿತಿ ಮೇ 5 ರವರೆಗೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಅಲ್ಲಲ್ಲಿ ಸುರಿಯುತ್ತಿದ್ದ ಮಳೆಯು, ಕಳೆದ ನಾಲ್ಕೈದು ದಿನಗಳಿಂದ ಕಣ್ಮರೆಯಾಗಿದ್ದರಿಂದ ಹಲವೆಡೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಭಾನುವಾರ ಸಹ 38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿದೆ.
ಇನ್ನು ಕಲಬುರಗಿಯಲ್ಲಿ 42.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, 8 ವರ್ಷಗಳ ಬಳಿಕ ಗರಿಷ್ಠ ತಾಪಮಾನಕ್ಕೆ ನಗರ ಸಾಕ್ಷಿಯಾಗುತ್ತಿದೆ. ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮೇ 2 ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ರಾಜ್ಯದಲ್ಲಿ ಭಾನುವಾರ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಏರಿಕೆ ಕಂಡುಬAದಿದ್ದು, ದಕ್ಷಿಣ ಒಳನಾಡಿನ ಹಲವು ಕಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆ 3.5ರಿಂದ 5 ಡಿ. ಸೆಲ್ಸಿಯಸ್‌ವರೆಗೆ ಉಷ್ಣಾಂಶ ಏರಿಕೆಯಾಗಿದೆ. ಇನ್ನು ಮೇ 2 ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.