ಬೆಂಗಳೂರು : ಪಕ್ಷದಿಂದ ಉಚ್ಚಾಟನೆಯಾದ ನಂತರವೂ ಬಿ.ಸ್.ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಗುಡುಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರಿಬ್ಬರೇ ಹೈಕಮಾಂಡ್ ಮೇಲೆ ಒತ್ತಡ ತಂದು ನನ್ನನ್ನು ಪಕ್ಷದಿಂದ ಹೊರಹಾಕಿಸಿದ್ದಾರೆ.
ಈಗಿನಿAದಲೇ ಅವರ ಅಂತ್ಯ ಆರಂಭ ಎಂದು ವಾಗ್ದಾಳಿ ನಡೆಸಿದರು. ಸುದ್ದಿ ಗಾರರ ಜತೆ ಮಾತನಾಡಿ, ನನಗೆ ಯಾವ ಮುಜುಗರವೂ ಇಲ್ಲ. ಯಡಿಯೂರಪ್ಪ ಅವರ ಕುಟುಂಬವನ್ನು ಪಕ್ಷದಿAದ ಹೊರಗೆ ಇಡುವವರೆಗೂ ನಾನು ಬಿಡುವುದಿಲ್ಲ ಎಂದು ಹೇಳಿದರು.
ನಾನು ಮತ್ತೆ ದೆಹಲಿಗೆ ಹೋಗುವುದಿಲ್ಲ. ಮರು ಪರಿಶೀಲನೆಗೆ ನಾನು ಮನವಿ ಮಾಡುವುದಿಲ್ಲ. ನಾನು ಹಿಂದೂ ಪರವಾಗಿ ಹೋರಾಟ ಮಾಡುತ್ತೇನೆ. ನಾನು ಬಿಜೆಪಿಯನ್ನು ತೊರೆಯುವುದಿಲ್ಲ. ರಾಜ್ಯಾದ್ಯಂತ ಸುತ್ತಿ ಬಿಜೆಪಿಯನ್ನು ರಿಪೇರಿ ಮಾಡುತ್ತೇನೆ. ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡುತ್ತಾರೆ. ಸನಾತನ ಹಿಂದೂ ಧರ್ಮದಿಂದ ಹಳಿ ತಪ್ಪಿರುವ ಪಕ್ಷವನ್ನು ಪುನಃ ಟ್ರ‍್ಯಾಕ್ ಮೇಲೆ ತರುವ ಕೆಲಸ ಮಾಡುತ್ತೇನೆಯೇ ಹೊರತು, ಯಾವತ್ತೂ ಹೊಸ ಪಕ್ಷ ಕಟ್ಟುವ ಸಾಹಸಕ್ಕೆ ಮುಂದಾಗುವುದಿಲ್ಲ ಎAದು ಹೇಳಿದರು.
ಉತ್ತರ ಕರ್ನಾಟಕದ ಬಗ್ಗೆ ಮಾತನಾಡುವವರು ಯಾರೂ ಇಲ್ಲ. ನಮ್ಮ ಹಿಂದೆ ಬಹಳ ದೊಡ್ಡ ಶಕ್ತಿ ಇದೆ. ರಾಘವೇಂದ್ರ ಹೊರತುಪಡಿಸಿ ಎಲ್ಲಾ ಸಂಸದರೂ ನಮ್ಮ ಪರ ಇದ್ದಾರೆ. ವಿಜಯೇಂದ್ರ ಸೇರಿ ಯಾರಿಗೂ 3 ಜನ ಸೇರಿಸುವ ಯೋಗ್ಯತೆ ಇಲ್ಲ. ಆದರೆ, ನಾನು ಬಾಡಿಗೆ ಜನ ತಂದಿಲ್ಲ. ನಿನ್ನೆ ವಿಜಯಪುರದಲ್ಲಿ ಬಾಡಿಗೆ ಕೊಟ್ಟು ಕರೆಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಯಡಿಯೂರಪ್ಪ ಅವರಾಗಲೀ, ನಾನಾಗಲೀ ಹೈಕಮಾಂಡ್ ಮೇಲೆ ಒತ್ತಡ ತಂದು ಉಚ್ಚಾಟನೆ ಮಾಡಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಹಲವು ಬಾರಿ ಬಸನಗೌಡಪಾಟೀಲ ಯತ್ನಾಳರಿಗೆ ನೋಟಿಸ್ ಕೊಟ್ಟು ಅವರನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ರಾಜ್ಯಾಧ್ಯಕ್ಷನಾಗಿ ನಾನು ಪಕ್ಷದ ಮುಖಂಡರ ಜೊತೆ ಯತ್ನಾಳರನ್ನು ಭೇಟಿ ಮಾಡಿ ಪಕ್ಷದ ಹಿತದೃಷ್ಟಿಯಿಂದ ಸಣ್ಣಪುಟ್ಟ ಗೊಂದಲ ಸರಿಪಡಿಸಿಕೊಳ್ಳೋಣ ಎಂದಿದ್ದೆ. ಸದನ ಇದ್ದಾಗ ಭೋಜನ ಕೂಟಕ್ಕೂ ನಾನೇ ಆಹ್ವಾನಿಸಿದ್ದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪಕ್ಷದ ಕೇಂದ್ರದ ವರಿಷ್ಠರು ಸಾಕಷ್ಟು ಸಮಯ ಕಾದಿದ್ದಾರೆ. ವರಿಷ್ಠರು ಇದೆಲ್ಲವನ್ನೂ ಗಮನಿಸಿ ಉಚ್ಚಾಟನೆಯ ಅಂತಿಮ ನಿರ್ಧಾರ ಪ್ರಕಟಿಸಿದ್ದಾರೆ ಎಂದರು. ರಾಜ್ಯದಲ್ಲಿ ಬಿಜೆಪಿಯನ್ನು ಸ್ವಂತ ಬಲದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನನಗೆ ಈ ಜವಾಬ್ದಾರಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆಗಬೇಕೆಂದು ನಾನು ಕನಸು ಕಂಡಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಗುರಿಯೊಂದಿಗೆ ಹೋರಾಡುತ್ತಿದ್ದೇನೆಯೇ ಹೊರತು ಮುಖ್ಯಮಂತ್ರಿ ಸ್ಥಾನಕ್ಕಾಗಿ ಅಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.