ಬೆಂಗಳೂರು : ಕನ್ನಡ ಚಲನ ಚಿತ್ರ ನಟ ಯಶ್ ರವರ ಹುಟ್ಟುಹಬ್ಬಕ್ಕೆ ಶುಭಕೋರಲು ಬ್ಯಾನರ್ ಕಟ್ಟುವ ಸಂಧರ್ಭದಲ್ಲಿ ವಿದ್ಯುತ್ ಕಂಬಕ್ಕೆ ತಾಕಿದ ಕಾರಣ 3 ಅಭಿಮಾನಿಗಳು ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದ ಬೆನ್ನಲ್ಲೇ ನಟ ಯಶ್ ಅಭಿಮಾನಿಗಳ ಮನೆಗೆ ನೀಡಿ ಮೃತರ ಕುಟುಂಬಕ್ಕೆ ಶಾಂತ್ವನ ಹೇಳಿದ್ದರು.ಈ ಹಿನ್ನೆಲೆ ಮೃತ ಅಭಿಮಾನಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಚೆಕ್ ತಲುಪಿಸಿದ್ದಾರೆ.
ನಟ ಯಶ್ ಅವರ ಜನ್ಮದಿನದ ಹಿನ್ನಲೆಯಲ್ಲಿ ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಅಭಿಮಾನಿಗಳು ನಿಧನರಾದ ನೋವು ಇನ್ನೂ ಹಸಿಯಾಗಿದೆ. ಮೃತ ಅಭಿಮಾನಿಗಳಾದ ಮುರಳಿ, ನವೀನ್ ಮತ್ತು ಹನುಮಂತ ಅವರ ಕುಟುಂಬದವರಿಗೆ ಪರಿಹಾರ ಹಣ ತಲುಪಿಸಲಾಗಿದೆ. ಯಶ್ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಪರಿಹಾರದ ಚೆಕ್ ನೀಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಚೆಕ್ ನೀಡಲಾಗಿದೆ. ಯಶ್ ಸ್ನೇಹಿತರು ಬಂದು ಪರಿಹಾರ ಹಣ ನೀಡಿದ್ದಾಗ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಕ್ಕಳನ್ನು ಕಳೆದುಕೊಂಡ ನೋವು ಪೋಷಕರನ್ನು ಕಾಡುತ್ತಿದೆ ಎಂದು ತಿಳಿಸಿದ್ದಾರೆ.
ಅಭಿಮಾನಿಗಳ ಸಾವಿನ ಸುದ್ದಿ ತಿಳಿದು ಯಶ್ ಅವರು ಕಂಬನಿ ಮಿಡಿದರು. ಮರುದಿನ ಅವರು ಸೊರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಮೃತರ ಮನೆಗಳಿಗೆ ತೆರಳಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಈ ವೇಳೆ ಅವರಿಗೆ ಪರಿಹಾರ ಹಣದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ತಮ್ಮ ಕೈಲಾದ ಸಹಾಯ ಮಾಡುವುದಾಗಿ ಯಶ್ ತಿಳಿಸಿದ್ದರು. ಈಗ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೀಡಿರುವುದು ತಿಳಿದುಬಂದಿದೆ.


