ಬೆಂಗಳೂರು : ತನ್ನ ಮೂವರು ಹೆಣ್ಣು ಮಕ್ಕಳ ಕಾಲೇಜು ಫೀಸ್ ಗಾಗಿ ತಂದೆ ಯೊಬ್ಬರು ಕಷ್ಟಪಟ್ಟು ಕೂಡಿಟ್ಟಿದ್ದಂತಹ ಹಣ ಮತ್ತು ಚಿನ್ನಾಭರಣವನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಪ್ಯಾಲೇಸ್ ಆವರಣದಲ್ಲಿ ವಾಸಿಸುವ ಶ್ರೀನಿವಾಸ್ ಎಂಬ ಕಾರ್ಮಿಕರ ಮನೆಯಲ್ಲಿ ಕಳ್ಳತನ ನಡೆದಿದೆ. ತನ್ನ ಮೂವರು ಹೆಣ್ಣು ಮಕ್ಕಳ ಕಾಲೇಜು ಶುಲ್ಕಕ್ಕಾಗಿ ಸಾಲ ಮಾಡಿ ಸಂಗ್ರಹಿಸಿದ್ದ 65,೦೦೦ ರೂಪಾಯಿ ನಗದು ಮತ್ತು 5 ಗ್ರಾಂ. ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಮಧ್ಯಾಹ್ನದ ವೇಳೆ, ಶ್ರೀನಿವಾಸ್ ಮತ್ತು ಅವರ ಪತ್ನಿ ಕೆಲಸಕ್ಕೆ ತೆರಳಿದ್ದರು, ಅವರ ಮೂವರು ಮಕ್ಕಳು ಕಾಲೇಜಿಗೆ ಹೋಗಿದ್ದರು. ವಾಪಸ್ ಬಂದು ನೋಡುವಷ್ಟರಲ್ಲಿ ಈ ಸಂದರ್ಭದಲ್ಲಿ ಮನೆ ಖಾಲಿಯಾಗಿತ್ತು. ಅಪರಿಚಿತ
ವ್ಯಕ್ತಿಗಳು ಮನೆಯ ಬಾಗಿಲನ್ನು ಮುರಿದು ಒಳನುಗ್ಗಿ, ಕಳೆದ ವಾರ ಸಾಲದ ಮೂಲಕ ತಂದಿದ್ದ 65,೦೦೦ ರೂಪಾಯಿ ನಗದು ಮತ್ತು 5ಗ್ರಾಂ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ.
ಘಟನೆಯ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ಶಂಕಿತರನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ಈ ಹಣ ಮಕ್ಕಳ ಭವಿಷ್ಯಕ್ಕಾಗಿ ಇಟ್ಟಿದ್ದೆ, ಈಗ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಶ್ರೀನಿವಾಸ್ ಕಣ್ಣೀರಿಟ್ಟು ಗೋಳಾಡಿದ್ದಾರೆ.