ಬೆಂಗಳೂರು : ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಮುಡಾ ಅಕ್ರಮದ ಸುಳಿಯಲ್ಲಿ ಇಡೀ ಸಿಎಂ ಸಿದ್ಧರಾಮಯ್ಯ ಕುಟುಂಬವೇ ಸಿಲುಕುವ ಸಾಧ್ಯತೆ ಇದೆ. ಇದೀಗ ಮುಡಾ ಹಗರಣ ಕೇಸ್ನಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ.
ಸೈಟ್ ಹಂಚಿಕೆ ವಿವಾದ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾಗಿತ್ತು. ಇದೀಗ ಚುನಾವಣಾ ಆಯೋಗಕ್ಕೆ ಸಿದ್ದರಾಮಯ್ಯ ವಿರುದ್ಧ ಹೋರಾಟಗಾರ ಟಿಜೆ ಅಬ್ರಹಾಂ ದೂರು ನೀಡಿದ್ದಾರೆ. ಕೃಷಿ ಜಮೀನಿನ ಬಗ್ಗೆ ಚುನಾವಣಾ ಅಫಿಡವಿಟ್ನಲ್ಲಿ ತಮ್ಮ ಪತ್ನಿ ಹೆಸರಲ್ಲಿರುವ 3.16 ಎಕರೆ ಜಮೀನು ಬಗ್ಗೆ ಮಾಹಿತಿ ಮುಚ್ಚಿಟ್ಟ ಆರೋಪ ಮಾಡಿದ್ದಾರೆ.
2013ರ ಚುನಾವಣಾ ಅಫಿಡವಿಟ್ನಲ್ಲಿ ದಾಖಲೆಗಳು ಸಲ್ಲಿಕೆ ಆಗಿಲ್ಲ. ಸಿದ್ದರಾಮಯ್ಯ ಗಮನದಲ್ಲಿದ್ದೂ ಕೂಡ ಕೃಷಿ ಜಮೀನಿನ ವಿವರಗಳನ್ನು ಮುಚ್ಚಿ ಇಡಲಾಗಿದೆ. ಉದ್ದೇಶ ಪೂರ್ವಕವಾಗಿ ಕಲಂ ಖಾಲಿ ಬಿಟ್ಟಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಜನತಾ ಪ್ರಾತಿನಿಧ್ಯ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸದ್ಯ ಸೋಮವಾರದಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗ್ತಿದೆ. ಈ ಅಧಿವೇಶನದಲ್ಲಿ ಮುಡಾ, ವಾಲ್ಮೀಕಿ ನಿಗಮ ಹಗರಣವೇ ಸರ್ಕಾರದ ವಿರುದ್ಧ ಬಿಜೆಪಿಗೆ ಬ್ರಹ್ಮಾಸ್ತ್ರದ ರೀತಿ ಸಿಕ್ಕಿದೆ. ಅಧಿವೇಶನದಲ್ಲಿ ಸರ್ಕಾರವನ್ನ ಕಟ್ಟಿಹಾಕಲು ಬೃಹತ್ ಪ್ರತಿಭಟನೆಗೆ ಮುಂದಾಗಿದೆ.ಮುಡಾ ಅಕ್ರಮ ತಾರ್ಕಿಕ ಅಂತ್ಯ ಮುಟ್ಟಿಸುವ ಸಲುವಾಗಿ ಪಾದಯಾತ್ರೆ ಅನ್ನೋ ಅಸ್ತ್ರ ಪ್ರಯೋಗಿಸ್ತಿದೆ. ಆಗಸ್ಟ್ ಮೊದಲ ವಾರದಲ್ಲಿ ಪಾದಯಾತ್ರೆ ಹೊರಡಲು ಬಿಜೆಪಿ ಪಡೆ ರೂಪುರೇಷೆ ಸಿದ್ಧಗೊಳಿಸ್ತಿದೆ.