ಬೆಂಗಳೂರು : ಬಿಜೆಪಿ ಸರ್ಕಾರದಲ್ಲಿ ಸಮಯದಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರ ರಾಜಿನಾಮೆ ಆಗ್ರಹಿಸಿ 2022ರ ಏಪ್ರಿಲ್ 14 ರಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಸಿದ್ದರಾಮಯ್ಯ, ಸಚಿವ ಎಂಬಿ ಪಾಟೀಲ್ ಸೇರಿದಂತೆ ಕಾಂಗ್ರೆಸ್ನ ನಾಯಕರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ನಿವಾಸಕ್ಕೆ ಕಾನೂನು ಬಾಹಿರವಾಗಿ ಪಾದಯಾತ್ರೆ ನಡೆಸಿದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣ ಹಿನ್ನೆಲೆ ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ, ಮಾರ್ಚ್ 7 ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, 11 ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆರ್ ಎಸ್ ಸುರ್ಜೇವಾಲಾ ಮತ್ತು ಮಾರ್ಚ್ 15 ರಂದು ಭಾರೀ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಜರಾಗುವಂತೆ ಸೂಚಿಸಲಾಗಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸಂಪುಟದ ಸಚಿವರಾದ ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ ಹಾಗೂ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದು, ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಿದೆ.ಪ್ರತಿನಿಧಿಗಳು ಮೊದಲು ನಿಯಮವನ್ನು ಅನುಸರಿಸಬೇಕು ಎಂದು ಹೈಕೋರ್ಟ್ ತಾಕೀತು ಮಾಡಿತು.
ಜನಪ್ರತಿನಿಧಿಗಳು ಈ ರೀತಿ ನಡೆದರೆ ಸಾಮಾನ್ಯ ಜನರ ಗತಿ ಏನು ? ಕಾನೂನು ಪಾಲಿಸಿದರೆ ಜನ ಪಾಲಿಸುತ್ತಾರೆ. ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರೆ ಜನರಿಗೆ ಕಷ್ಟವಾಗುತ್ತದೆ. ಸಿಟಿ ಲೈಫ್ ಈಸ್ ಟಾರ್ಚರ್, ಪ್ರತಿಭಟನೆಗಳಿಂದ ಜನರಿಗೆ ಮತ್ತಷ್ಟು ತೊಂದರೆಯಾಗುತ್ತದೆ. ಜನಪ್ರತಿನಿಧಿಯಾದ ಕಾರಣಕ್ಕೆ ರಸ್ತೆ ಅಡ್ಡಗಟ್ಟುವುದನ್ನು ಒಪ್ಪಲು ಸಾಧ್ಯವಿಲ್ಲ. ಜನ ನಾಯಕರಾದವರು ಮೊದಲು ಕಾನೂನು ಪಾಲಿಸಬೇಕು ಎಂದು ನ್ಯಾಯಾಲಯ ಚಾಟಿ ಬೀಸಿದೆ.


