ಬೆಂಗಳೂರು : ಕೆಲ ದಿನಗಳಿಂದ ನೇಪಥ್ಯಕ್ಕೆ ಸರಿದಿದ್ದ ಮುಖ್ಯಮಂತ್ರಿ ಬದಲಾವಣೆ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. ಸಿ ಎಂ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುAದುವರಿಯಲಿದ್ದಾರೆ ಎAದು ಕೆಲವರು ಹೇಳಿದ್ದರೆ, ನವೆಂಬರ್‌ನಲ್ಲಿ ನಾಯಕತ್ವ ಬದಲಾವಣೆ ಖಚಿತವಾಗಿದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ಖಚಿತ ಎನ್ನುವ ಮಾತೂ ಕೇಳಿ ಬಂದಿದೆ.ನಾನೇ ಪೂರ್ಣಾವಧಿ ಸಿಎಂ ಎಂಬ ಸಿದ್ದ ರಾಮಯ್ಯ ಅವರ ಮಾತಿನ ನಡುವೆಯೇ ನಾಯಕತ್ವ ಬದಲಾವಣೆ ಮಾತನಾಡಿದ್ದ ಇಬ್ಬರು ಮುಖಂಡರಿಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ನೋಟಿಸ್ ಜಾರಿಗೊಳಿಸಿದೆ
ನವೆಂಬರ್‌ನಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಂದು ಕೆಲವು ಸಚಿವರೇ ಬಹಿರಂಗ ಹೇಳಿಕೆ ನೀಡಿದ್ದರಾದರೂ, ಸಿಎಂ ಸ್ಥಾನದ ಬದಲಾವಣೆ ಬಗ್ಗೆ ಉಲ್ಲೇಖಿಸಿರಲಿಲ್ಲ. ಆದರೆ ಕುಣಿಗಲ್ ಶಾಸಕ ಡಾ.ರಂಗನಾಥ್ ಹಾಗೂ ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ನವೆಂಬರ್‌ನಲ್ಲಿ ನಾಯಕತ್ವ ಬದಲಾವಣೆ ಖಚಿತ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯಲಿದ್ದಾರೆ ಎಂದು ಡಿಸಿಎA ಅವರೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ನಾಯಕತ್ವ ಬದಲಾವಣೆ ಗೊಂದಲವಿಲ್ಲ ಎಂದಿದ್ದರು.
ಕೈ ಪಾಳೆಯದಲ್ಲಿ ಗೊಂದಲ : ಅತ್ತ ಮೈಸೂರಿನಲ್ಲಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಸಿಎಂ ಬದಲಾವಣೆ ಮಾತೇ ಇಲ್ಲ ಎಂದು ಪುನರುಚ್ಚರಿಸಿದ್ದರೆ, ನಾನೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ. ಮುಂದಿನ ದಸರಾ ಉತ್ಸವದ ಜಂಬೂಸವಾರಿಗೂ ನಾನೇ ಪುಷ್ಪಾರ್ಚನೆ ಮಾಡುವ ವಿಶ್ವಾಸವಿದೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದೂ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧವಾಗಿರಬೇಕಾಗುತ್ತದೆ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ನವೆಂಬರ್‌ನಲ್ಲಿ ಸಂಪುಟ ಪುನಾರಚನೆ ಪಕ್ಕಾ ಎಂದು ಸಚಿವ ಜಮೀರ್ ಅಹ್ಮದ್ ಸಹಿತ ಹಲವರು ಹೇಳಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯೋ? ಸಚಿವಸಂಪುಟ ಪುನಾರಚನೆಯೋ? ಎಂಬ ಗೊಂದಲ ಸೃಷ್ಟಿಯಾಗಿದ್ದು ಇದನ್ನು ನವೆಂಬರ್ ಕ್ರಾಂತಿಯ ಮುನ್ನುಡಿ ಎಂದೇ ಕೈ ಪಾಳೆಯದಲ್ಲಿ
ವಿಶ್ಲೇಷಿಸಲಾಗುತ್ತಿದೆ.
ನಾನು, ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಮಾತಿಗೆ ಬದ್ಧವಾಗಿದ್ದೇವೆ. ಈ ವಿಚಾರದಲ್ಲಿ ಅನಗತ್ಯ ಚರ್ಚೆ ಬೇಡ ಎಂದು ಸ್ವತಃ ನಾನೇ ಹೇಳುತ್ತಿದ್ದೇನೆ. ನಿನ್ನೆ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದರೂ ಕೆಲವು ಮಾಧ್ಯಮಗಳು ಬೇರೆ ರೀತಿ ಬರೆಯುತ್ತಿದ್ದಾರೆ. ಸಿದ್ದರಾಮಯ್ಯ ಮಾತು ಅಂತಿಮ. ಇನ್ನೂ ಈ ವಿಚಾರವಾಗಿ ಚರ್ಚೆ ಮಾಡಿದಲ್ಲಿ, ಪಕ್ಷಕ್ಕೆ ಡ್ಯಾಮೇಜ್ ಮಾಡಿದಂತೆ.ಯಾರ ಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹಾನಿ ಮಾಡಿದಂತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆ ನೀಡಿದ ಶಾಸಕ ರಂಗನಾಥ್ ಹಾಗೂ ಶಿವರಾಮೇಗೌಡ ಅವರಿಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್‌ಖಾನ್ ಗುರುವಾರ ನೋಟಿಸ್ ಮಾಡಿದ್ದಾರೆ. ನಿಮ್ಮ ಹೇಳಿಕೆ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದ್ದು, ಇದರಿAದ ಪಕ್ಷಕ್ಕೆ ಮುಜುಗರವಾಗಿದೆ. ಆಶಿಸ್ತು ಎಂದು ಪರಿಗಣಿಸಲಾಗಿದೆ. ಒಂದು ವಾರದಲ್ಲಿ ಸಮಜಾಯಿಷಿ ನೀಡುವಂತೆಯೂ ಸೂಚಿಸಲಾಗಿದೆ.