ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆದಿದ್ದ ಸಚಿವ ಜಮೀರ್ಅಹ್ಮದ್ ಖಾನ್ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ತಾವು ಕರಿಯ ಎಂದು ಕರೆದಿರುವುದಕ್ಕೆ ಕ್ಷಮೆ ಕೋರುತ್ತೇನೆ. ತಮ್ಮ ಮಾತಿನಿಂದ ಜೆಡಿಎಸ್ ನಾಯಕರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನಾನು ಮೊದಲಿನಿಂದಲೂ ಕರಿಯಣ್ಣ ಎಂದು ಕರೆಯುತ್ತಿದ್ದೆ. ಕುಮಾರಸ್ವಾಮಿ ಕೂಡ ನನ್ನನ್ನು ಕುಳ್ಳ ಎಂದು ಕರೆಯುತ್ತಿದ್ದರು. ಹಾಗಾಗಿ ನಾನು ಈ ರೀತಿ ಮಾತನಾಡಿದ್ದೆ. ಏನೇ ಇರಲಿ ನನ್ನ ಮಾತಿಗೆ ಕ್ಷಮೆ ಕೋರುತ್ತೇನೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ಗೌರವವಿದೆ. ಹಿಂದೆ ಅವರು ಮುಸ್ಲಿಂ ಮತ ಬೇಡ ಎಂದು ಹೇಳಿದ್ದರು. ಈಗ ದುಡ್ಡು ಕೊಟ್ಟು ಮತ ಖರೀದಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಇತ್ತು. ಇದನ್ನು ಉಲ್ಲೇಖಿಸಿ ನಾನು ಕುಮಾರಸ್ವಾಮಿ ವಿರುದ್ಧ ಕರಿಯಾ ಪದ ಬಳಸಿದ್ದೆ ಅಷ್ಟೆ ಎಂದು ಅವರು ಹೇಳಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ಅಹ್ಮದ್ ಖಾನ್ ಉರ್ದುವಿನಲ್ಲಿ ಮಾತನಾಡುವಾಗ ಕರಿಯ ಎಂದು ಕರೆದಿದ್ದರು. ಈ ವೀಡಿಯೊ ಎಲ್ಲೆಡೆ ವೈರಲ್ ಆಗಿ ಜಮೀರ್ಅಹ್ಮದ್ ವಿರುದ್ಧ ಜೆಡಿಎಸ್-ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿ ಕ್ಷಮೆಗೆ ಒತ್ತಾಯಿಸಿದ್ದರು. ಕುಮಾರಸ್ವಾಮಿ ಅವರನ್ನು ತಾವು ಕರಿಯ ಎಂದು ಕರೆದಿದ್ದು ವಿವಾದಕ್ಕೆ ಒಳಗಾಗುತ್ತಿದ್ದಂತೆಯೇ ಎಚ್ಚೆತ ಸಚಿವ ಜಮೀರ್ ಈಗ ಕ್ಷಮೆ ಕೇಳಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.