ಬೆಂಗಳೂರು : ಮನುಷ್ಯರಲ್ಲೂ ಮೃಗರೂಪದವರು ಇದ್ದರೆಂಬುದಕ್ಕೆ ಈ ದೃಶ್ಯನೇ ಸಾಕ್ಷಿ. ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಕಾರು ಹರಿಸಿ ಚಾಲಕ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ನಡೆದಿದೆ.ಮೂಕ ಪ್ರಾಣಿ ತನ್ನ ಪಾಡಿಗೆ ಆರಾಮಾವಾಗಿ ಮಲಗಿತ್ತು ಆದರೆ ಚಾಲಕನೊಬ್ಬ ಕಾರಲ್ಲಿ ಯಮನಂತೆ ಬಂದು ಎಂಟ್ರಿ ಕೊಟ್ಟಿದ್ದಲ್ಲದೆ ಆ ವೇಳೆ ರಸ್ತೆ ಮೇಲೆ ಮಲಗಿಕೊಂಡಿದ್ದ ಕರುವಿನ ಮೇಲೆ ಕಾರು ಹತ್ತಿಸಿ ಅಕ್ಷರಶಃ ರಾಕ್ಷಸನಂತೆ ವರ್ತಿಸಿದ್ದಾನೆ.
ಮಾರ್ಚ್ 2ರಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಸರಹದ್ದು. ಠಾಣೆಯ ಕೂಗಳತೆಯ ದೂರದಲ್ಲಿರುವ ಇದೇ ಜಾಗದಲ್ಲಿ ಆಸಾಮಿ, ಕರು ಮೇಲೆ ಕಾರು ಹತ್ತಿಸಿದ್ದ. ಘಟನೆಯಲ್ಲಿ ಕರುವಿನ ಹೊಟ್ಟೆ, ಕಾಲಿಗೆ ಗಂಭೀರ ಗಾಯವಾಗಿದೆ. ಕಳೆದ ವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಾಲಕನ ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಈ ವೇಳೆ ಹೊಟ್ಟೆ-ಕಾಲಿಗೆ ಗಂಭೀರವಾದ ಗಾಯವಾಗಿತ್ತು.ಕೂಡಲೇ ಗ್ರೀನ್ ಆರ್ಮಿ ಫೋರ್ಸ್ ಸಿಬ್ಬಂದಿ ಕರುವನ್ನ ರಕ್ಷಣೆ ಮಾಡುವ ಪ್ರಯತ್ನ ನಡೆದ್ರೂ ಕೂಡ, ಚಿಕಿತ್ಸೆ ಫಲಕಾರಿಯಾಗದೆ ಮೂಕ ಪ್ರಾಣಿ ಸಾವಿನ ಮನೆ ಸೇರಿದೆ.
ಕರುವಿನ ಮೇಲೆ ಕಾರು ಹತ್ತಿಸಿ ಕ್ರೌರ್ಯದ ಕೇಕೆ ಹಾಕಿದ ಕಿರಾತಕನ ಕೃತ್ಯ, ಆ ಮೂಕ ಪ್ರಾಣಿ ಮರಣವೇದನೆಯಲ್ಲಿ ನರಳಾಡಿದ ದೃಶ್ಯ ಮನಕುಲುಕುವಂತಿದೆ .ಈ ವಿಡಿಯೋ ವೈರಲ್ ಆಗಿದ್ದು ಪ್ರಾಣಿಪ್ರಿಯರು ಅಮಾನವೀಯವಾಗಿ ಎರಗಿದ ಪಾಪಿಯ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲು ಮಾಡಲು ಕೂಡ ಪ್ರಾಣಿಪ್ರಿಯರು ಮುಂದಾಗಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.


