ಬೆಂಗಳೂರು : ದೇಶದಲ್ಲಿ ಹವಾಮಾನ ವೈಪರೀತ್ಯ ಹಾಗೂ ಇನ್ನಿತರ ಸಮಸ್ಯೆಯಿಂದ ದಿನನಿತ್ಯ ಬಳಕೆಮಾಡುವ ವಸ್ತುಗಳ ಬೆಲೆ ಏರಿಕೆಯಾಗುವುದು ಸಹಜವಾಗಿದೆ ಆದ್ರೆ ಈ ಬಾರಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸರದಿಯಾಗಿದೆ .
ಸಾಮಾನ್ಯ ಜನರ ಊಟದ ತಟ್ಟೆಗಳು ಹಣದುಬ್ಬರಕ್ಕೆ ತುತ್ತಾಗಿವೆ. ಕೆಲವೇ ದಿನಗಳ ಹಿಂದೆ ಟೊಮೆಟೋ, ಈರುಳ್ಳಿ ಶತಕದ ಗಡಿ ದಾಟಿತ್ತು.ಇದೀಗ ಬೆಳ್ಳುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 500 ರಿಂದ 550 ರೂ.ಗೆ ತಲುಪಿದೆ. ಸಾಮಾನ್ಯವಾಗಿ ಕೆ.ಜಿ.ಗೆ 150 ರಿಂದ 200 ರೂ.ಗೆ ಮಾರಾಟವಾಗುವ ಬೆಳ್ಳುಳ್ಳಿ ಸಾಮಾನ್ಯ ಜನರ ಜೇಬಿಗೆ ಹೊರೆಯಾಗುತ್ತಿದೆ. ಈರುಳ್ಳಿ ರಿಟೇಲ್ನಲ್ಲಿ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಎಪಿಎಂಸಿಯಲ್ಲಿ ಹೋಲ್ಸೇಲ್ ನಲ್ಲಿ 50 ರಿಂದ 60 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ ಈರುಳ್ಳಿ ಬೆಲೆ ಏರಿಕೆಯಿಂದ ಜನರ ಅಡುಗೆ ಮನೆಯೇ ಅಸ್ತವ್ಯಸ್ತವಾಗಿದೆ .
ಈರುಳ್ಳಿ, ಬೆಳ್ಳುಳ್ಳಿ ಆಮದು ಆಗದಿರುವುದೇ ದರ ಏರಿಕೆಗೆ ಕಾರಣ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಬೆಳೆ ನಾಶವಾಗಿದೆ. ಇದರಿಂದ ಮಾರುಕಟ್ಟೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ದರ ಹೆಚ್ಚಳವಾಗಿದೆ. ಬೆಳ್ಳುಳ್ಳಿ ದರ ಈಗಾಗಲೇ ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದೆ. ಎಪಿಎಂಸಿಯಲ್ಲಿ ಸಾಮಾನ್ಯ ಬೆಳ್ಳುಳ್ಳಿಗೆ 400 ರಿಂದ 450 ರುಪಾಯಿಗೆ ಮಾರಾಟವಾಗುತ್ತಿದೆ. ಫಸ್ಟ್ಕ್ವಾಲಿಟಿ 450 ರಿಂದ 500 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಇತ್ತ ರಿಟೇಲ್ ಮಾರುಕಟ್ಟೆಯಲ್ಲಿ, ಅಂದರೆ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣಪುಟ್ಟ ಮಾರುಕಟ್ಟೆಗಳಲ್ಲಿ ಸಾಮಾನ್ಯ ಬೆಳ್ಳುಳ್ಳಿ ಕೆಜಿಗೆ 450 ರಿಂದ 500 ರೂಪಾಯಿಗೆ ಮಾರಾಟವಾಗುತ್ತಿದೆ. ಫಸ್ಟ್ ಕ್ವಾಲಿಟಿ ಬೆಳ್ಳುಳ್ಳಿ ಕೆಜಿಗೆ 550 ರಿಂದ 600 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಬೆಳ್ಳುಳ್ಳಿ 600 ರೂಪಾಯಿ ಆಗಲಿದೆ. ಇತ್ತ ಮಹಾರಾಷ್ಟ್ರದಿಂದ ಜನವರಿ ತಿಂಗಳಿನಲ್ಲಿ ಮಾಲ್ ಬರುತ್ತದೆ ಅಲ್ಲಿಯವರೆಗೆ ದರ ಏರಿಕೆ ಆಗುತ್ತಿರುತ್ತದೆ. ಮಹಾರಾಷ್ಟ್ರದಿಂದ ಈರುಳ್ಳಿ, ಬೆಳ್ಳುಳ್ಳಿ ಬರಲು ಆರಂಭವಾದರೆ, ದರ ಇಳಿಕೆಯಾಗುತ್ತೆ ಎಂದು ತಿಳಿಸಿದ್ದಾರೆ.ಒಟ್ಟಿನಲ್ಲಿ ಅಡುಗೆಮೆನೆ ಹೋಟೆಲ್ ಉದ್ಯಮ ಈ ಬೆಲೆ ಏರಿಕೆಯಿಂದಾಗಿ ತಲೆಕೆಡಿಸಿಕೊಂಡಿದ್ದಾರೆ.