ಬೆಂಗಳೂರು : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಆಗಮಿಸುತ್ತಿದ್ದು ಮಂಡ್ಯ ಹಾಗೂ ಕೋಲಾರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ, ರ್ಯಾಲಿ ನಡೆಸಲಿದ್ದಾರೆ.
ದೆಹಲಿಯಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬರಲಿರುವ ರಾಹುಲ್, ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ.ಇಂದು ಮಧ್ಯಾಹ್ನ 2 ಗಂಟೆಗೆ ಮಂಡ್ಯದ ವಿವಿ ಆವರಣದಲ್ಲಿ ಪ್ರಜಾಧ್ವನಿ- 2 ಸಮಾವೇಶ ನಡೆಯಲಿದ್ದು ರಾಹುಲ್ ಭಾಗಿಯಾಗಲಿದ್ದಾರೆ. ಮಂಡ್ಯಕ್ಕೆ ರಾಹುಲ್ ಗಾಂಧಿ ಆಗಮನದಿಂದ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.ಈ ನಡುವೆ ಜಾತಿ ರಾಜಕೀಯಕ್ಕೆ ಕೈಹಾಕಿದ್ದು ಹಳೇ ಮೈಸೂರು ಗೆಲ್ಲುವುದಕ್ಕೆ ಕಾಂಗ್ರೆಸ್ ಈಗಾಗಲೇ ಒಂದು ಕಾರ್ಡ್ ಪ್ಲೇ ಮಾಡಿದೆ. ಅದು ಒಕ್ಕಲಿಗ ಜಾತಿ ಕಾರ್ಡ್. ಇದೇ ಒಕ್ಕಲಿಗ ಅಸ್ತ್ರವನ್ನ ಮತ್ತಷ್ಟು ಜೀವಂತವಾಗಿಡಲು ಕಾಂಗ್ರೆಸ್ ಮತ್ತೊಂದು ಪ್ಲ್ಯಾನ್ ಮಾಡಿಕೊಂಡಿದೆ. ಮೋದಿ ಆಗಮನಕ್ಕೂ ಕೌಂಟರ್ ಕೊಡಲು ಇಂದು ರಾಹುಲ್ ಗಾಂಧಿಯವರನ್ನ ಅಖಾಡಕ್ಕೆ ಇಳಿಸುತ್ತಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಚೊಕ್ಕಂಡಹಳ್ಳಿ ಗ್ರಾಮದ ಬಳಿ ಸುಮಾರು 50 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಇನ್ನು . ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ.ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮೂರು ಬಾರಿ ಬಂದು ಬಿರುಗಾಳಿಯಂತೆ ಪ್ರವಾಸ ನಡೆಸಿದ್ದಾರೆ. ಹಲವಾರು ಕಡೆಗಳಲ್ಲಿ ಪ್ರಚಾರ ಸಭೆ, ರ್ಯಾಲಿಗಳನ್ನು ಅವರು ನಡೆಸಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಶಕ್ತಿ ತುಂಬಿದ್ದಾರೆ. ಆದರೆ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ರಾಜ್ಯದ ಚುನಾವಣೆ ಪ್ರಚಾರ ಕಣಕ್ಕೆ ಕಾಲಿಡುತ್ತಿದ್ದಾರೆ.