ಬೆಂಗಳೂರು : ನವೆಂಬರ್ 19, 2022ರಂದು ಮಂಗಳೂರಿನಲ್ಲಿನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಉಗ್ರ ಶಾರೀಕ್ ಎಂಬಾತ ಆಟೋದಲ್ಲಿ ಕುಕ್ಕರ್ ಬಾಂಬ್ ತೆಗೆದುಕೊಂಡು ಹೋಗುತಿದ್ದಾಗ ದಾರಿ ಮಧ್ಯೆಯೇ ಸ್ಫೋಟಗೊಂಡಿತ್ತು. ಈ ವೇಳೆ ಆಟೋ ಚಾಲಕ ಹಾಗೂ ಶಂಕಿತ ಉಗ್ರ ಇಬ್ಬರೂ ಗಾಯಗೊಂಡಿದ್ದರು. ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದ್ದವು. ಇದೀಗ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ರೂವಾರಿ, ತುಂಗಾ ತೀರದಲ್ಲಿ ಬಾಂಬ್ ಟ್ರಯಲ್ ಪ್ರಕರಣದ ರೂವಾರಿ ಶಾರಿಕ್‌ನನ್ನ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರೀಕ್ ಸೇರಿದಂತೆ ಪ್ರಕರಣದ ಇನ್ನಿತರ ಆರೋಪಿಗಳ ವಿಚಾರಣೆ ನಡೆಸಲಾಗಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಅಕ್ರಮ ಹಣ ವರ್ಗಾವಣೆಯ ಬಗ್ಗೆ ಇಡಿ ತೀವ್ರ ತನಿಖೆ ನಡೆಸುತ್ತಿದೆ. ಆರೋಪಿ ಶಾರೀಖ್ಗೆ ವಿದೇಶದಿಂದ ಹಣ ಸಂದಾಯವಾಗುತ್ತಿತ್ತಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.ಕೆಲ ಮುಸ್ಲಿಂ ರಾಷ್ಟ್ರಗಳಿಂದ ಆರೋಪಿಗಳಿಗೆ ಹಣ ಸಂದಾಯ ಆಗಿರೋದು ಎನ್‌ಐಎ ಹಾಗೂ ಇ.ಡಿ ತನಿಖೆ ವೇಳೆ ಅಕ್ರಮ ಹಣದ ವ್ಯವಹಾರ ಬಗ್ಗೆ ಮಾಹಿತಿ ಸಿಕ್ಕಿತ್ತು.ಶಾರಿಕ್ ಮಾತ್ರವಲ್ಲದೆ, ಪರಪ್ಪರ ಅಗ್ರಹಾರ ಜೈಲಿನಲ್ಲಿರುವ ಇತರ ಶಂಕಿತ ಉಗ್ರರನ್ನೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಿಗೆ, ಅಕ್ರಮ ಹಣ ಸಂದಾಯ ಆಗಿತ್ತು ಎಂಬ ಆರೋಪಗಳ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.