ಬೆಂಗಳೂರು : ಮೊದಲು ನಗರ ಪಾಲಿಕೆ, ಮಹಾನಗರ ಪಾಲಿಕೆ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರದಿಂದ ಗ್ರೇಟರ್ ಬೆಂಗಳೂರು ಆಗಿ ಬದಲಾಗಲಿದೆ. ಇನ್ನು ಮುಂದೆ ಬಿಬಿಎಂಪಿ ಇತಿಹಾಸದ ಪುಟ ಸೇರಲಿದ್ದು ಇನ್ನೇನಿದ್ದರೂ ಗ್ರೇಟರ್ ಬೆಂಗ ಳೂರು ಆಡಳಿತ ಜಾರಿಗೆ ಬರಲಿದೆ ಇದಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 (2025ರ ಕರ್ನಾಟಕ ಅಧಿನಿಯಮ ಸಂಖ್ಯೆ 36) ರ ಒಂದನೇ ಪ್ರಕರಣದ (3) ನೇ ಉಪ ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವೂ ಈ ಮೂಲಕ ಸದರಿ ಅಧಿನಿಯಮವನ್ನು ಎಲ್ಲಾ ಪ್ರಕರಣಗಳು ಹಾಗೂ ಉಪಬಂಧಗಳು ನಾಳೆಯಿಂದ ೧೫.-೦೫-೨೦೨೫ ರಿಂದ ಜಾರಿಗೆ ಬರತಕ್ಕದೆಂದು ಗೊತ್ತುಪಡಿಸಿದೆ. ಜಾರಿಗೆ ಬರಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಡಿಸಿಎಂ ಅವರು ಉಪಾಧ್ಯಕ್ಷರಾಗಲಿದ್ದು ಬಿಬಿಎಂಪಿ ಆಡಳಿತಾಧಿಕಾರಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರು ಜಿಬಿಎ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಬಿಬಿಎಂಪಿ ರಚನೆಯಾದ ಮೇಲೆ ಬಿಬಿಎಂಪಿ ಆಯುಕ್ತರನ್ನು ಮುಖ್ಯ ಆಯುಕ್ತರನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ವಿಧಾನ ಮಂಡಲದಲ್ಲಿ ಮಾರ್ಚ್ 13 ರಂದು ಅAಗೀಕಾರವಾಗಿದ್ದ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2025 ಯನ್ನು ರಾಜ್ಯಪಾಲರ ಅಂಕಿತಕ್ಕಾಗಿ 2025ರ ಮಾರ್ಚ್ 17ರಂದು ಕಳುಹಿಸಲಾಗಿತ್ತು. ಮಸೂದೆಯು ಸಂವಿಧಾನದ 74ನೇ ತಿದ್ದುಪಡಿಗೆ ವಿರುದ್ಧವಾಗಿದೆ ಮತ್ತು ದೆಹಲಿ ಮಹಾನಗರ ಪಾಲಿಕೆಯ ವಿಭಜನೆ ಸಂದರ್ಭದಲ್ಲಿ ಆದಂತ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಬೆಂಗಳೂರು ಟೌನ್ ಹಾಲ್ ಸಂಘಟನೆ ಹಾಗೂ ಬಿಜೆಪಿ ನಾಯಕರ ನಿಯೋಗಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದವು. ಮಸೂದೆಯನ್ನು ತಡೆ ಹಿಡಿಯುವಂತೆಯೂ ಕೂಡ ಒತ್ತಾಯಿಸಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು ಎರಡೂ ಮನವಿಗಳನ್ನು ನಾನು ಪರಿಶೀಲಿಸಿದ್ದೇನೆ. ಈ ಮಸೂದೆಯು ಕಾನೂನಾತ್ಮಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಒಳಗೊಂಡಿದೆ. ಆದ್ದರಿಂದ ಎರಡೂ ಮನವಿ ಪತ್ರಗಳಲ್ಲಿ ಪ್ರಸ್ತಾಪಿಸಿರುವ ಪ್ರಮುಖ ವಿಷಯಗಳ ಕುರಿತು ಸ್ಪಷ್ಟನೆ ಅಗತ್ಯವಿದೆ ಎಂದು ಮಾರ್ಚ್ 25ರಂದು ಮಸೂದೆಯನ್ನು ಹಿಂದಿರುಗಿಸಿದ್ದರು. ರಾಜ್ಯಪಾಲರಿಗೆ ಪುನಃ ರಾಜ್ಯ ಸರ್ಕಾರ ಅಗತ್ಯ ಸ್ಪಷ್ಟತೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಏಪ್ರಿಲ್ ೨೪ರಂದು ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದರು


