Friday, March 13, 2026
Flats for sale
Homeಕ್ರೈಂಬೆಂಗಳೂರು : ಬಿಟ್​ ಕಾಯಿನ್ ಹಗರಣ ಕೇಸ್: ಎಸ್​ಐಟಿ ಅಧಿಕಾರಿಗಳಿಂದ IPS ಅಧಿಕಾರಿ ಸಂದೀಪ್ ಪಾಟೀಲ್​...

ಬೆಂಗಳೂರು : ಬಿಟ್​ ಕಾಯಿನ್ ಹಗರಣ ಕೇಸ್: ಎಸ್​ಐಟಿ ಅಧಿಕಾರಿಗಳಿಂದ IPS ಅಧಿಕಾರಿ ಸಂದೀಪ್ ಪಾಟೀಲ್​ ವಿಚಾರಣೆ.

ಬೆಂಗಳೂರು: ಬಹುಕೋಟಿ ಬಿಟ್‌ಕಾಯಿನ್ ಹಗರಣದ ತನಿಖೆಯು ಮಹತ್ವದ ಘಟ್ಟ ತಲುಪಿದ್ದು, ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಸಿಐಡಿಯ ವಿಶೇಷ ತನಿಖಾ ದಳದ (ಎಸ್‌ಐಟಿ) ಎದುರು ಬುಧವಾರ ಹಾಜರಾಗಿದ್ದಾರೆ.

ನಗರದ ಕಾರ್ಲ್ಟನ್ ಭವನದಲ್ಲಿರುವ ಅಪರಾಧ ತನಿಖಾ ವಿಭಾಗದ (ಸಿಐಡಿ) ಕೇಂದ್ರ ಕಚೇರಿಯಲ್ಲಿರುವ ಸಿಐಡಿ ಎಡಿಜಿಪಿ ಹಾಗೂ ಎಸ್‌ಐಟಿ ಮುಖ್ಯಸ್ಥ ಮನೀಶ್ ಖರ್ಬಿಕರ್ ಎದುರು ಸಂದೀಪ್ ಪಾಟೀಲ್ ವಿಚಾರಣೆಗೆ ಒಳಗಾದರು.

ಹಿಂದೆ ಬಿಟ್‌ಕಾಯಿನ್ ಹಗರಣ ಸಂಭವಿಸಿದ ವೇಳೆ ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಹಾಗೂ ಸದ್ಯ ಕೆಎಸ್‌ಆರ್‌ಪಿಯ ಐಜಿಪಿಯಾಗಿರುವ ಸಂದೀಪ್ ಪಾಟೀಲ್ ಅವರನ್ನು ಸರಿಸುಮಾರು ೨ ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.

ಮೂಲಗಳ ಪ್ರಕಾರ, ಮುಂದಿನ ಸೋಮವಾರದ ಒಳಗಾಗಿ ಮತ್ತೊಮ್ಮೆ ಸಂದೀಪ್ ಪಾಟೀಲ್ ಅವರನ್ನು ವಿಚಾರಣೆಗೆ ಕರೆಯಲಾಗುತ್ತದೆ ಎನ್ನಲಾಗಿದೆ. ಇಡೀ ಹಗರಣದ ಕೇಂದ್ರ ಬಿಂದುವಾಗಿರುವ ಪ್ರಮುಖ ಆರೋಪಿ ಶ್ರೀಕಿ ನೀಡಿರುವ ಹೇಳಿಕೆ ಆಧರಿಸಿ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹಿಂದೆ ತನಿಖೆ ನಡೆಸಿದ ಡಿವೈಎಸ್‌ಪಿ, ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್‌ಗಳು ಎಸಗಿದ ಪ್ರಮಾದಗಳ ಬಗೆಗೆತನಿಖಾದಳ ಮಾಹಿತಿ ಪಡೆದಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ಎಸ್‌ಐಟಿ ಅಧಿಕಾರಿಗಳು ಬಿಟ್‌ಕಾಯಿನ್ ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಬೆಂಗಳೂರು ಮೂಲದವರೇ ಆದ ಯುನಿಕಾಯಿನ್ ಎಂಬ ಕ್ರಿಪ್ಟೊ ಕರೆನ್ಸಿ ಕಂಪನಿಯ ಅಧಿಕಾರಿಗಳನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ನಿರ್ಧರಿಸಿದ್ದು, ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮತ್ತಷ್ಟು ವ್ಯಕ್ತಿಗಳ ವಿಚಾರಣೆ ಮುಂದುವರಿಯಲಿದೆ. ಕೆಲ ಪೊಲೀಸ್ ಅಧಿಕಾರಿಗಳು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಅರ್ಜಿ ಇತ್ಯರ್ಥದ ನಂತರ ಎಸ್‌ಐಟಿ ಮುಂದಿನ ಕಾನೂನಾತ್ಮಕ ಕ್ರಮ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular