ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್-೧೯ ನಿರ್ವಹಣೆ ಮತ್ತು ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪಗಳ ಸಂಬAಧ ತನಿಖೆಗಾಗಿ ರಚಿಸಲಾದ ಏಕಸದಸ್ಯ ವಿಚಾರಣಾ ಆಯೋಗವು ಬುಧವಾರ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದೆ.
ಎರಡು ಜಿಲ್ಲೆಗಳ ವೆಚ್ಚದ ವರದಿ : ವಿಚಾರಣಾ ಆಯೋಗದ ಮುಖ್ಯಸ್ಥರಾದ ನಿವೃತ್ತ ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಅಂತಿಮ ವರದಿ ಸಲ್ಲಿಸಿದರು. ಈ ವರದಿಯ ವಿವರ ಇನ್ನೂ ಬಹಿರಂಗವಾಗಿಲ್ಲವಾದರೂ, ಇದು ಬೆಂಗಳೂರು ನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಆಗಿರುವ ಖರೀದಿಗಳಲ್ಲಿನ ಅಕ್ರಮಗಳಿಗೆ ಸಂಬAಧಿಸಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ನಗರದಲ್ಲಿ 63.79 ಕೋಟಿ ರೂ ವೆಚ್ಚವಾಗಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ 42.19 ಕೋಟಿ ರೂ ಖರ್ಚು ಮಾಡಲಾಗಿದೆ ಹೇಳಲಾಗಿದೆ.
ವರದಿ ಬಿಡುಗಡೆಗೆ ಉಲ್ಲೇಖ: ಕುನ್ಹಾ ಅವರು ವರದಿಯಲ್ಲಿನ ಅಂತಿಮ ಹೇಳಿಕೆಯಲ್ಲಿ, ಸರ್ಕಾರವು ವರದಿಯ ಸಂಶೋಧನೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ತಿಳಿಸಿದ್ದಾರೆ. ಈ ವಿಷಯದಲ್ಲಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ಖರೀದಿಗಳಲ್ಲಿನ ಸುಧಾರಣೆಗಳು ಹಾಗೂ ಪಾರದರ್ಶಕತೆಯ ಬಗ್ಗೆ ತಕ್ಷಣದ ಅಗತ್ಯತೆ ಗಮನದಲ್ಲಿಟ್ಟುಕೊಂಡು, ಸರ್ಕಾರವು ವರದಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಉಲ್ಲೇಖಿಸಿದ್ದಾರೆ
ಔಷಧ, ಉಪಕರಣಗಳು ಮತ್ತು ಒಟ್ಟಾರೆ ಸಾಂಕ್ರಾಮಿಕ ನಿರ್ವಹಣೆಯ ಖರೀದಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಶಂಕಿಸಿದ ಹಿನ್ನೆಲೆಯಲ್ಲಿ, ಆಗಸ್ಟ್ ೨೦೨೩ರಲ್ಲಿ ವಿಚಾರಣಾ ಆಯೋಗವನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ನವೆಂಬರ್ ೨೦೨೪ರಲ್ಲಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಇದೀಗ ಅಂತಿಮ ವರದಿ ವರ್ಷಾಂತ್ಯಕ್ಕೆ ಸಲ್ಲಿಕೆಯಾಗಿದೆ.


