ಬೆಂಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಎಂಎಲ್ಸಿ ಸಿ.ಟಿ.ರವಿಗೆ ಬಿಗ್ ರಿಲೀಫ್ ಸಿಕ್ಕಿದೆ. ತಕ್ಷಣ ಸಿ.ಟಿ.ರವಿಯವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಂ.ಜಿ.ಉಮಾ ನೇತೃತ್ವದ ಪೀಠವು ಆರೋಪಿಯನ್ನು ತಕ್ಷಣವೇ ಬಿಡುಗಡೆ ಮಾಡಿ. ಸಿ.ಟಿ.ರವಿ ಈಗ ಎಲ್ಲಿದ್ದಾರೋ ಅಲ್ಲಿಯೇ ಬಿಡುಗಡೆ ಮಾಡಿ ಎಂದು ಮಧ್ಯಂತರ ಆದೇಶ ನೀಡಿದ್ದಾರೆ. ಜಾಮೀನಿಗಾಗಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಾಳೆ ಮುಂಡೂಡಿತ್ತು. ಆದ್ರೆ, ಇದೀಗ ಹೈಕೋರ್ಟ್ನಲ್ಲಿ ಸಿಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿಟಿ ರವಿ ವಿರುದ್ಧ ಎಫ್ಐಆರ್ ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಕ್ಷಣ ಬಿಡುಗಡೆಗೆ ಮಧ್ಯಂತರ ಆದೇಶ ಹೊರಡಿಸಿದೆ. ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಅವರು ಮಾತನಾಡಿದ್ದ ಬಗ್ಗೆ ಯಾವುದೇ ರೆಕಾರ್ಡ್ ಇಲ್ಲ. ಆದರೆ, ಅಶ್ಲೀಲ ಪದ ಬಳಸಿದ್ದಾರೆ ಎಂದು ನಾಲ್ವರು ಸಾಕ್ಷಿ ಹೇಳಿದ್ದಾರೆ ಎಂದು ವಿಧಾನಪರಿಷತ್ಸ ಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಡಿಯೋ ರೆಕಾರ್ಡ್ ಆಗಿಲ್ಲ ಸಾಕ್ಷಿಗಳು ಮಾತ್ರ ಇವೆ. ರೆಕಾರ್ಡ್ ಹುಡುಕಿದ್ದೇನೆ ನಮಗೆ ಆಡಿಯೋ ಸಿಕ್ಕಿಲ್ಲ. ನಾಲ್ವರು ಸದಸ್ಯರು ಸಾಕ್ಷಿ ಹೇಳಿದ್ದಾರೆ. ಸಿಟಿ ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಇಬ್ಬರು ನೀಡಿರುವ ದೂರನ್ನೂ ಪಡೆದಿದ್ದೇವೆ ಎಂದು ತಿಳಿಸಿದರು.
ಸದನದಲ್ಲಿ ಪ್ರಶ್ನೋತ್ತರ ವೇಳೆ ಮುಗಿದ ಬಳಿಕ,ಕಾಂಗ್ರೆಸ್ನವರು ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ದ ಪ್ರತಿಭಟನೆಗೆ ಮುಂದಾದರು. ಈ ವೇಳೆ ಗಲಾಟೆ ನಡೆಯಿತು ಇದರಿಂದ ಕಲಾಪ ಮುಂದೂಡಿದೆ. ಆ ವೇಳೆ ಇದೆಲ್ಲ ಗಲಾಟೆ ಆಗಿದೆ. ಸಂಜೆ ೬ ಗಂಟೆಗೆ ಸಿಟಿ ರವಿ ಬಂಧನವಾಗಿರುವ ಬಗ್ಗೆ ಮಾಹಿತಿ ನನಗೆ ಬಂದಿದೆ ಎಂದರು.
ನಾನು ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ಅವರನ್ನು ಕರೆದು ಮಾತನಾಡಿದೆ. ಇದನ್ನು ಇಲ್ಲಿಗೆ ಮುಗಿಸೋಣ ಎಂದು ಸಲಹೆ ನೀಡಿದೆ. ನಾನು ಹತಾಶರಾಗಿದ್ದಾರೆ ಎಂದಿದ್ದೇನೆ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಸಿಟಿ ರವಿ ಅವರು ಹೇಳಿದರು, ಎಂದು ಸಭಾಪತಿಗಳು ಮಾಹಿತಿ ನೀಡಿದರು.


