ಬೆಂಗಳೂರು : ಇಂಧನ ಸಚಿವರೂ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನಲಾದ ಸ್ಮಾರ್ಟ್ ಮೀಟರ್ ಹಗರಣದ ವಿರುದ್ಧ ತನಿಖೆ ನಡೆಸಬೇಕೆಂದು ಸರಕಾರದ ಮೇಲೆ ಒತ್ತಡ ತರಲು ರಾಜ್ಯ ಬಿಜೆಪಿ ಆನ್‌ಲೈನ್ ಮೂಲಕ ಮಂಗಳವಾರ ಸಹಿ ಅಭಿಯಾನ ಆರಂಭಿಸಿದೆ.
ಈ ಕುರಿತು ರಾಜ್ಯ ಬಿಜೆಪಿ ಕಾರ್ಯಾಲಯ ದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, 15 ಸಾವಿರ ಕೋಟಿ ರೂ. ಹಗರಣದ ವಿರುದ್ಧ ಜನಜಾಗೃತಿ ಹಾಗೂ ಆನ್‌ಲೈನ್ ಮೂಲಕ ಸಹಿ ಅಭಿಯಾನವನ್ನು ಬಿಜೆಪಿ ಇಂದು ಆರAಭಿಸುತ್ತಿದೆ ಈ ಮೂಲಕ ಸರಕಾರದ ಹಗಲುದರೋಡೆಯನ್ನು ಜನತೆಗೆ ತಿಳಿಸಲಿದ್ದೇವೆ. ಸಣ್ಣ ಕೈಗಾರಿಕೆಗಳು, ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ಬಿಲ್ ಕಟ್ಟಲು ಕಷ್ಟವಾಗಿದೆ ಎಂದು ವಿವರಿಸಿದರು.
ಸಿಎಜಿ, ಪ್ರಿನ್ಸಿಪಲ್ ಆಡಿಟರ್ ಜನರಲ್‌ಗೂ ದೂರು ನೀಡಿದ್ದೇವೆ. ಆದಷ್ಟು ಬೇಗನೆ ತನಿಖೆ ಮಾಡಲು ಕೋರಿದ್ದೇವೆ. ಎಲ್ಲ ದಿಕ್ಕಿನಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಹಗಲು-ರಾತ್ರಿ ಭ್ರಷ್ಟಾಚಾರ ಮಾಡುವವರಿಗೆ ಸ್ಪಷ್ಟ ಸಂದೇಶ ನೀಡುವ ಪ್ರಯತ್ನ ಇದಾಗಿದೆ. ಸಾರ್ವಜನಿಕರು ಕೂಡ ನೇರವಾಗಿ ದೂರು ಕೊಡಬಹುದು ಎಂದು ಹೇಳಿದರು. ಇಂಧನ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಹಳೆಯ ಗ್ರಾಹಕರಿಗೂ ಇದನ್ನೇ ವಿಸ್ತರಿಸಿದರೆ ಎಲ್ಲರೂ 1.5 ಲಕ್ಷ ರೂ. ಕೊಡಬೇಕಾಗುತ್ತದೆ. 2.5 ಕೋಟಿ ಗ್ರಾಹಕರಿಗೆ ವಿಸ್ತರಿಸಿದರೆ ಕೋಟ್ಯಂತರ ಭ್ರಷ್ಟಾಚಾರ ನಡೆದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಹಗರಣದ ವಿಷಯವನ್ನು ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದೇವೆ. ಇದನ್ನು ತಾರ್ಕಿಕ ತುದಿ ಮುಟ್ಟಿಸಲು ಈಗಾಗಲೇ ನಿನ್ನೆ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇವೆ. ಸಮಾಜ ಮತ್ತು ಸರಕಾರದ ಗಮನ ಸೆಳೆದಿದ್ದೇವೆ ಎಂದು ವಿವರಿಸಿದರು. ಕೇಬಲ್‌ಗಳು, ವಿದ್ಯುತ್ ಖರೀದಿಯಲ್ಲೂ ಭ್ರಷ್ಟಾಚಾರ ಆಗಿರಬಹುದು. ಈ ಇಲಾಖೆಯಲ್ಲಿ ಕಾನೂನು ಪರಿಪಾಲನೆ ಲೆಕ್ಕಕ್ಕೆ ಇಲ್ಲ. ಸದನದಲ್ಲಿ ಹೇಳಿದರೂ ಪ್ರಯೋಜನವಿಲ್ಲ. ಇಂಥ ಭಂಡಗೆಟ್ಟವರಿಗೆ, ಬೇಲಿಯೇ ಎದ್ದು ಹೊಲ ಮೇಯುವ ಸ್ಥಿತಿ ಇರುವಾಗ ಜನರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಇಷ್ಟ ಬಂದAತೆ ಮೇಯುವ ಪರಿಸ್ಥಿತಿ ಇದೆ ಎಂದು ಆಕ್ಷೇಪಿಸಿದರು.’
ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ರಾಜ್ಯ ಸಾಮಾಜಿಕ ಜಾಲತಾಣ ಸಹ ಸಂಚಾಲಕ ನರೇಂದ್ರ ಮೂರ್ತಿ ಅವರು ಉಪಸ್ಥಿತರಿದ್ದರು.