Friday, March 13, 2026
Flats for sale
Homeರಾಜಕೀಯಬೆಂಗಳೂರು : ಬಿಜೆಪಿಯಲ್ಲಿ ಟಿಕೆಟ್ ಘೋಷಣೆಗೂ ಮೊದಲೇ ಬಣ ರಾಜಕೀಯ,ಬೀದಿರಂಪಾಟ ಶುರು.

ಬೆಂಗಳೂರು : ಬಿಜೆಪಿಯಲ್ಲಿ ಟಿಕೆಟ್ ಘೋಷಣೆಗೂ ಮೊದಲೇ ಬಣ ರಾಜಕೀಯ,ಬೀದಿರಂಪಾಟ ಶುರು.

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಕನಸಿನ ಗುರಿಯೊಂದಿಗೆ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ದೇಶಾದ್ಯಂತ ಸಜ್ಜಾಗುತ್ತಿದ್ದು, ಕರ್ನಾಟಕ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಗೂ ಮೊದಲೇ ಬೀದಿರಂಪ ಶುರುವಾಗಿದೆ.

ರಾಜ್ಯದ 28 ಲೋಕಸಭೆ ಸ್ಥಾನಗಳ ಪೈಕಿ ಎಲ್ಲವನ್ನೂ ಗೆಲ್ಲುವ ಹುರುಪಿನಲ್ಲಿರುವ ಬಿಜೆಪಿಯಲ್ಲಿ ಟಿಕೆಟ್ ಘೋಷಣೆಗೂ ಮೊದಲೇ ಬಣ ರಾಜಕೀಯ, ಪರಸ್ಪರ ಕಾಲೆಳೆಯುವುದು, ಸ್ವಪಕ್ಷೀಯ ಸಂಸದರ ವಿರುದ್ಧವೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಹಿರಂಗ ಹೇಳಿಕೆ ನೀಡಲು ಮುಂದಾಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನಗಳಿಂದ 66 ಸ್ಥಾನಗಳಿಗೆ ಕುಸಿದ ರಾಜ್ಯ ಬಿಜೆಪಿ ಸೋಲಿನಿಂದ ಪಾಠ ಕಲಿತಿಲ್ಲವೇ? ಎಂಬ ಚರ್ಚೆ ಪಕ್ಷದಲ್ಲೇ ಆರಂಭವಾಗಿದೆ. ಪ್ರಮುಖವಾಗಿ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಹಾಲಿ ಸಂಸದ ಸಿ.ಕೆ.ಪ್ರತಾಪಸಿಂಹ ಅವರಿಗೆ ಈ ಬಾರಿ ಸಿಗುವುದಿಲ್ಲ ಎಂಬ ಚರ್ಚೆ ಇಡೀ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ.

ಪ್ರತಾಪಸಿಂಹ ಬದಲಾಗಿ ಮೈಸೂರು ಮಹಾರಾಜ ಯದುವೀರ ಒಡೆಯರ್ ಅವರಿಗೆ ನೀಡಲು ರಾಷ್ಟ್ರೀಯ ವರಿಷ್ಠರು ಮುಂದಾಗಿದ್ದಾರೆ ಎಂಬ ವದಂತಿಯೇ ಇಡೀ ಗೊಂದಲಕ್ಕೆ ಕಾರಣವಾಗಿದೆ. ಒಂದು ವೇಳೆ ಮೈಸೂರು ಟಿಕೆಟ್‌ನನ್ನು ಯದುವೀರ ಒಡೆಯರ್‌ಗೆ ನೀಡದರೆ ಮೈಸೂರು-ಕೊಡಗು ಮಾತ್ರವಲ್ಲದೇ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿಗೆ ಹೆಚ್ಚು ಅನುಕೂಲ ಆಗಲಿದೆ ಎಂಬುದು ವರಿಷ್ಠರ ಉದ್ದೇಶವಾಗಿದೆ. ಆದರೆ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ಪ್ರತಾಪಸಿಂಹ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟಿಕೆಟ್ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಾಪಸಿಂಹ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕೂಡ ಪ್ರತಾಪಸಿಂಹ ಅವರಿಗೆ ಟಿಕೆಟ್ ಸಿಗಲಿದೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದು ಎಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಸಭೆ ಸೇರಿ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮುತ್ತಿಗೆ ಹಾಕಿ ಶೋಭಾ ವಿರುದ್ಧ ಘೋಷಣೆ ಕೂಗಿದ್ದಾರೆ. ಮಾಜಿ ಸಚಿವ ಸಿ.ಟಿ.ರವಿ ಕೂಡ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದವರು ಈಗ ಅನುಭವಿಸುತ್ತಾರೆ ಎಂದು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಆದರೆ ಸಚಿವೆ ಶೋಭಾ ಮಾತ್ರ
ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ವರಿಷ್ಠರ ಮೇಲೆ ವಿಶ್ವಾಸವಿಟ್ಟು ಕುಳಿತಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಟಿಕೆಟ್ ಖಾತ್ರಿ ಆಗಿದೆ ಎಂಬ ವದಂತಿಯಿಂದ ರೊಚ್ಚಿಗೆದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮಾಧುಸ್ವಾಮಿ ಅವರಿಗೆ ಟಿಕೆಟ್ ನೀಡದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಪಕ್ಷದ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಮಾಧುಸ್ವಾಮಿ ಅವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು.ಈಗ ಕೊನೆ ಘಳಿಗೆಯಲ್ಲಿ ಟಿಕೆಟ್ ತಪ್ಪಿಸಬಾರದೆಂದು ಬಹಿರಂಗವಾಗಿಯೇ ಆಗ್ರಹಿಸಿದ್ದಾರೆ.

ರಾಜ್ಯದ ಇತರ ಕ್ಷೇತ್ರಗಳಲ್ಲಿ ಒಂದು ರೀತಿಯ ಗೊಂದಲವಾದರೆ ಹಾವೇರಿ ಲೋಕಸಭಾ ಕ್ಷೇತ್ರದ ಗೊಂದಲ ಬಹಳ ದೊಡ್ಡಮಟ್ಟದಲ್ಲಿ ರಾಜಕೀಯ ಪರಿಣಾಮ ಬೀರುವ ಲಕ್ಷಣಗಳು ಗೋಚರಿಸುತ್ತಿವೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಅವರಿಗೆ ಟಿಕೆಟ್ ಸಿಗುತ್ತಿಲ್ಲ ಎಂಬ ವಿಚಾರ ಯಡಿಯೂರಪ್ಪ ಅವರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಹಾವೇರಿ ಕ್ಷೇತ್ರದಿಂದ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಅಥವಾ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲು ರಾಷ್ಟ್ರೀಯ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರೆ. ಬೊಮ್ಮಾಯಿ ಅವರಿಗೆ ಹಾವೇರಿ ಟಿಕೆಟ್ ಕೊಟ್ಟರೆ ಶೆಟ್ಟರ್‌ಗೆ ಧಾರವಾಡ ಕ್ಷೇತ್ರ ಕೊಡಬೇಕೆಂಬ ಒತ್ತಡವಿದೆ. ಇದರ ಸುಳಿವು ದೊರೆತಿದ್ದರಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಯಡಿಯೂರಪ್ಪ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದೇ ವೇಳೆ ಈಶ್ವರಪ್ಪ ಅವರು ಹಾವೇರಿ ಬೊಮ್ಮಾಯಿ ಪರ ಯಡಿಯೂರಪ್ಪ ನಿಲುವು ತಾಳಿದ್ದಾರೆ ಎಂದು ಬೇಸರಿಸಿಕೊAಡಿದ್ದಾರೆ. ಮಾತ್ರವಲ್ಲ, ಕಾಂತೇಶ್ ಅವರನ್ನು ಶಿವಮೊಗ್ಗ ಅಥವಾ ಹಾವೇರಿಯಿಂದ ಪಕ್ಷೇತರರಾಗಿ ಕಣಕ್ಕಿಳಿಸುವ ವದಂತಿಯನ್ನೂ ಹರಿಬಿಟ್ಟಿದ್ದಾರೆ.

ಭಾನುವಾರ ರಾತ್ರಿ ದೆಹಲಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಸಂಸದೀಯ ಮಂಡಳಿ ಸಭೆ ರದ್ದಾದ ಬೆನ್ನಲ್ಲೇ ರಾಜ್ಯದ ನಾನಾ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಗಲಾಟೆ ತೀವ್ರಗೊಂಡಿದೆ. ಸೋಮವಾರ ರಾತ್ರಿ ಸಂಸದೀಯ ಮಂಡಳಿ ಸಭೆಯ ದಿನಾಂಕ ನಿಗದಿಯಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಹಿರಂಗ ಕಿತ್ತಾಟ ಕುರಿತಂತೆ ಪ್ರತಿಕ್ರಿಯೆ ನೀಡಿದೇ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಟಿಕೆಟ್ ಬೇಡಿಕೆ ಬಗ್ಗೆ ರಾಷ್ಟ್ರೀಯ ವರಿಷ್ಠರ ಕಡೆಗೆ ಬೆರಳು ತೋರಿ, ತಟಸ್ಥ ನಿಲುವು ಕಾಯ್ದುಕೊಂಡಿದ್ದಾರೆ. ದೆಹಲಿಯಲ್ಲಿಂದು ಸಭೆ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಸಂಬAಧ ಬಿಜೆಪಿ ಸಂಸದೀಯ ಮಂಡಳಿಯ ಸಭೆ ಮಾರ್ಚ್ 11 ರಂದು ಸಂಜೆ ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ಮಂಡಳಿಸದಸ್ಯ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸಮಿತಿಯ ಸದಸ್ಯರು ಭಾಗವಹಿಸುವರು. ಹೀಗಾಗಿ ಯಡಿಯೂರಪ್ಪ ಸೋಮವಾರ ಬೆಳಗ್ಗೆ 11.30 ಕ್ಕೆ ದೆಹಲಿಗೆ ವಿಮಾನದ ಮೂಲಕ ತೆರಳುವರು.
ಈಗಾಗಲೇ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಯಲ್ಲೇ ಇದ್ದು, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ದೆಹಲಿಗೆ ತೆರಳಲಿದ್ದಾರೆ. ಆದರೆ ಸಭೆಯಲ್ಲಿ ರಾಜ್ಯದಿಂದ ಯಡಿಯೂರಪ್ಪ ಮಾತ್ರ ಭಾಗಿಯಾಗಲಿದ್ದಾರೆ

courtsey : S.K

RELATED ARTICLES

LEAVE A REPLY

Please enter your comment!
Please enter your name here

Most Popular