ಬೆಂಗಳೂರು : ಬಿಗ್‌ಬಾಸ್ ರಿಯಾಲಿಟಿ ಶೋ ಭಾನುವಾರ ಮುಕ್ತಾಯಗೊಳ್ಳಲಿದೆ. ಬಿಗ್‌ಬಾಸ್ 11 ಸೀಸನ್ ನಿರೂಪಣೆ ಮಾಡಿದ ಹೆಗ್ಗಳಿಕೆ ಸುದೀಪ್ ಅವರದ್ದು. ಈ ಸೀಸನ್ ಕೊನೆಯ ನಿರೂಪಣೆ ಎಂದಿರುವ ಕಿಚ್ಚ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಳೆದ 11 ಸೀಸನ್‌ಗಳಿಂದ ನಾನು ಬಿಗ್‌ಬಾಸ್ಅ ನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫೈನಲ್ ನನ್ನ ಕೊನೆಯ ನಿರೂಪಣೆ. ನಿಮ್ಮನ್ನು ಮನರಂಜಿಸಲು ನಾನು ಪ್ರಯತ್ನಿಸುತ್ತೇನೆ. ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು. ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದೇನೆ ಎಂಬ ಸಂತೋಷ ನನಗಿದೆ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಬಿಗ್ ಬಾಸ್ ಸೀಸನ್ ನಡೆಯುವಾಗ ನನ್ನ ಸಿನಿಮಾದ ಶೂಟಿಂಗ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿತ್ತು. ಚೆನ್ನೈ ನಿಂದ ಅಲ್ಲಿಗೆ ಹೋಗಲು ಒಂದೂವರೆ ಗಂಟೆ ಬೇಕು. ಬೆಂಗಳೂರಿನಿಂದ ನಾನು ಅಲ್ಲಿಗೆ ಹೋಗಿ, ಅಲ್ಲಿ ಶೂಟಿಂಗ್ ಮಾಡಿ, ಮಧ್ಯರಾತ್ರಿ ಶೂಟಿಂಗ್ ಮುಗಿಸಿ, ಖಾಸಗಿ ವಿಮಾನದಲ್ಲಿ ವಾಪಸ್ ಬೆಂಗಳೂರಿಗೆ ಬಂದು ಬಿಗ್ ಬಾಸ್ ಎಪಿಸೋಡ್ ನೋಡಿ, ವೀಕೆಂಡ್ ಸಂಚಿಕೆ ಶೂಟ್ ಮಾಡಬೇಕು. ಇದರಿಂದ ನನಗೆ ತುಂಬ ಸುಸ್ತಾಗುತ್ತಿತ್ತು ಎಂದು ತಿಳಿಸಿದ್ದರು.
ನಾನು ಬೆಂಗಳೂರಿನಲ್ಲಿ ಇದ್ದರೆ ಯಾವುದೇ ಸಮಸ್ಯೆ ಇಲ್ಲ. ಬೇರೆ ಕಡೆ ಸಿನಿಮಾ ಶೂಟಿಂಗ್ ಇದ್ದಾಗ ಈ ಶೋ ಮಾಡಲು ಕಷ್ಟ ಆಗುತ್ತದೆ. ನಾನು ಎಲ್ಲಿಯೇ ಇದ್ದರೂ ಗುರುವಾರ ಶೂಟಿಂಗ್ ಮುಗಿಸಿಕೊಂಡು ಶುಕ್ರವಾರ ಓಡಿಬರಬೇಕು. ಸಿನಿಮಾದಲ್ಲಿ ಸಾವಿರ ಜನರು ಶೂಟಿಂಗ್ ಮಾಡುತ್ತಿರುತ್ತಾರೆ. ಆದರೆ ಬಿಗ್ ಬಾಸ್ ಸಲುವಾಗಿ ಶುಕ್ರವಾರ, ಶನಿವಾರ ಬ್ರೇಕ್ ಆಗುತ್ತದೆ. ಸಿನಿಮಾಗಳು ಇಲ್ಲದಿದ್ದಾಗ ಇದು ಓಕೆ. ಸಿನಿಮಾ ಶೂಟಿಂಗ್ ಇದ್ದರೆ ತಡ ಆಗುತ್ತದೆ. ಇಷ್ಟರವರೆಗೆ ಖುಷಿಯಿಂದಲೇ ಮಾಡಿದ್ದೇನೆ. ಈಗ ಬೇರೆಯಾರಾದರೂ ಮಾಡಲಿ ಎಂದು ಹೇಳಿದ್ದರು.