ಬೆಂಗಳೂರು : ನೆಲಮಂಗಲದಲ್ಲಿ ಚೂರಿಯಿಂದ ಕೊಲೆಗೈಯಲಾಗಿದ್ದ ಪಿಎಸ್‌ಐ ಜಗದೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಎ1 ಮಧು, ಎ2 ಹರೀಶ್‌ಬಾಬು ಹರೀಶ್‌ಗೆ ಬೆಂಗಳೂರು ಗ್ರಾಮಾಂತರ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ, 3 ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಾಧೀಶ ರಘುನಾಥ್ ತೀರ್ಪು ಪ್ರಕಟಿಸಿದ್ದಾರೆ.
2016ರಲ್ಲಿ ನೆಲಮಂಗಲದಲ್ಲಿ ನಡೆದಿದ್ದ ಪಿಎಸ್‌ಐ ಜಗದೀಶ್ ಕೊಲೆ ಪ್ರಕರಣ ಭಾರೀ ಸದ್ದು ಮಾಡಿತ್ತು.ರಾಬರಿ ಕೇಸ್ ಸಂಬಂಧ ಆರೋಪಿ ಮಧು ಹಾಗೂ ಹರೀಶ್ ಬಾಬು ಇವರನ್ನು ಹಿಡಿಯಲು ಪಿಎಸ್‌ಐ ಜಗದೀಶ್ ಬಂದಿದ್ದರು. ಈ ವೇಳೆ ಆಯತಪ್ಪಿ ಚರಂಡಿಯಲ್ಲಿ ಬಿದ್ದಿದ್ದರು. ಆಗ ಪಿಎಸ್‌ಐ ಜಗದೀಶ್‌ಗೆ ಆರೋಪಿಗಳು ಚಾಕುವಿನಿಂದ ಬರ್ಬರವಾಗಿ ಇರಿದಿದ್ದರು. ಜಗದೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಡಾನ್ ಆಗುವ ಆಸೆಯಿಂದ ಪಿಎಸ್ಐಯನ್ನೇ ಕೊಂದುಬಿಟ್ಟರುವುದಾಗಿ ತನಿಖೆ ವೇಳೆ ಪೊಲೀಸರಿಗೆ ಎ1 ಅರೋಪಿ ಮಧು@ಗೋಣ್ಣೆ ಹೇಳಿಕೆ ನೀಡಿದ್ದ. ಹೀಗಾಗಿ ನೆಲಮಂಗಲ ಟೌನ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 333, 307, 302, 397, 201, 212 , 75ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.8 ವರ್ಷಗಳ ವಿಚಾರಣೆ ಬಳಿಕ ಕೋರ್ಟ್‌ನಿಂದ ತೀರ್ಪು ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ರಘುನಾಥ್ ಮಹತ್ವದ ತೀರ್ಪು ನೀಡಿದ್ದಾರೆ. ಮೀನಾಕುಮಾರಿ ಹಾಗೂ ಎಸ್.ವಿ ಭಟ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಕರಣವು ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಅಂದಿನ ರಾಜ್ಯ ಸರ್ಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಸೂಚನೆಯಂತೆ ತನಿಖೆ ನಡೆಸಿದ್ದ ಪೊಲೀಸರು ಅಕ್ಟೋಬರ್ 20ರಂದು ಆರೋಪಿಗಳಾದ ಮಧು ಮತ್ತು ಕೃಷ್ಣರನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಬಂಧಿಸಿದ್ದರು.