ಬೆಂಗಳೂರು ; ವಿಧಾನ ಪರಿಷತ್‌ನ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದ್ದು, ಒಂದು ಸ್ಥಾನ ಮಾತ್ರ ಗೆದ್ದಿದೆ. ಜೂ. 3 ರಂದು ನಡೆದಿದ್ದ ವಿಧಾನ ಪರಿಷತ್‌ನ 6 ಸ್ಥಾನಗಳ ಮತ ಎಣಿಕೆ ಇಂದು ಪೂರ್ಣಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ 3, ಜೆಡಿಎಸ್ 2, ಬಿಜೆಪಿ 1 ಸ್ಥಾನ ಗೆದ್ದಿದೆ. ಬೆಂಗಳೂರು ಪದವೀಧರ ಆಗ್ನೇಯ ಶಿಕ್ಷಕರ ಕ್ಷೇತ್ರ, ಈಶಾನ್ಯ ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಬಿಜೆಪಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದು, ಜೆಡಿಎಸ್ ದಕ್ಷಿಣ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದು ಬೀಗಿದೆ.
ಮೂರು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿಯ ಭದ್ರಕೋಟೆಯಾಗಿದ್ದ ಬೆಂಗಳೂರು ಪದವೀಧರ ಕ್ಷೇತ್ರ, ಬಿಜೆಪಿಯ ಕೈ ತಪ್ಪಿದ್ದು, ಇಲ್ಲಿ ಕಾಂಗ್ರೆಸ್‌ನ ರಾಮೋಜಿಗೌಡ ಬಿಜೆಪಿಯ ಅ. ದೇವೇಗೌಡ ಅವರನ್ನು ಪರಾಭವಗೊಳಿಸಿ 36 ವರ್ಷಗಳ ನಂತರ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟಿದ್ದಾರೆ.
ಆಗ್ನೇಯ ಶಿಕ್ಷಕರ ಕ್ಷತ್ರದಲ್ಲೂ ಬಿಜೆಪಿ ಸೋತಿದ್ದು, ಕಳೆದ ಮೂರು ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆ ಯಾಗುತ್ತಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್‌ನ ಅಭ್ಯರ್ಥಿ ಮಾಜಿ ಸಚಿವ ಎ. ಕೃಷ್ಣಪ್ಪ ಅವರ ಅಳಿಯ ಡಿ.ಟಿ ಶ್ರೀನಿವಾಸ್, ಬಿಜೆಪಿಯ ನಾರಾಯಣಸ್ವಾಮಿ ಅವರನ್ನು ಸೋಲಿಸಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಂಡಿದ್ದ ಬಿಜೆಪಿ -ಜೆಡಿಎಸ್ ಪರಿಷತ್ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡು ಜೆಡಿಎಸ್ 2 ಕ್ಷೇತ್ರಗಳಲ್ಲಿ, ಬಿಜೆಪಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಕಾಂಗ್ರೆಸ್ 6 ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಈ ಪೈಕಿ ಜೆಡಿಎಸ್ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಜಯ ಗಳಿಸಿದ್ದರೆ, ಕಾಂಗ್ರೆಸ್ ಪಕ್ಷ ೩ ಸ್ಥಾನಗಳಲ್ಲಿ ಜಯಗಳಿಸಿ ಬಿಜೆಪಿ 1 ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ.
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿಜೆಪಿಯ ಡಾ. ಧನಂಜಯ ಸರ್ಜಿ ಅವರು ಕಾಂಗ್ರೆಸ್‌ನ ಆಯನೂರು ಮಂಜುನಾಥ್ ವಿರುದ್ಧ ಗೆದ್ದಿದ್ದಾರೆ.
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಘುಪತಿಭಟ್ ೩ನೇ ಸ್ಥಾನ ಗಳಿಸಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ವಿವೇಕಾ ನಂದ ಅವರು ಕಾಂಗ್ರೆಸ್‌ನ ಮರೀತಿಬ್ಬೇಗೌಡ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದು, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಎಸ್.ಎಲ್ ಭೋಜೇಗೌಡ ಕಾಂಗ್ರೆಸ್‌ನ ಕೆ.ಕೆ ಮಂಜುನಾಥ್ ವಿರುದ್ಧ ಜಯಗಳಿಸಿ ದ್ದಾರೆ.
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚAದ್ರಶೇಖರ್ ಪಾಟೀಲ್ ಬಿಜೆಪಿಯ ಅಭ್ಯರ್ಥಿ
ಅಮರ್‌ನಾಥ್ ಪಾಟೀಲ್ ವಿರುದ್ಧ ಜಯಗಳಿಸಿದ್ದಾರೆ.