ಬೆಂಗಳೂರು : ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹುಟ್ಟುಹಬ್ಬದ ಸಂಭ್ರಮ, ಗುಂಡು-ತುಂಡಿನ ಪಾರ್ಟಿ, ಎಣ್ಣೆ ಪಾರ್ಟಿಗಳ ವಿಡಿಯೋಗಳು ವೈರಲ್ ಆಗಿ ರಾಜ್ಯ ವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದವು. ಈ ಹಿನ್ನೆಲೆಯಲ್ಲಿ ನಡೆದ ತನಿಖೆ ಮತ್ತೊಂದು ತಿರುವು ಪಡೆದಿದ್ದು, ಪರಪ್ಪನ ಅಗ್ರಹಾರದಲ್ಲೇ ಕೈದಿಗಳು ಕಳ್ಳಬಟ್ಟಿ ತಯಾರಿಸುತ್ತಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ವೈರಲ್ ವಿಡಿಯೋಗಳ ತನಿಖೆ ಮಾಡುವಾಗ, ಜೈಲಿನೊಳಗೆ ಮದ್ಯ ತಯಾರಿಕಾ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿತ್ತು ಎಂಬ ಸಂಗತಿ ಪೊಲೀಸರಿಗೆ ಪತ್ತೆಯಾಗಿದೆ. ಪಾರ್ಟಿಗಳಿಗಾಗಿ ಹೊರಗಿನಿಂದ ಮದ್ಯವನ್ನು ತಂದಿಲ್ಲ, ಬದಲಾಗಿ ಕೈದಿಗಳೇ ಜೈಲಿನೊಳಗೇ ಕಳ್ಳಬಟ್ಟಿ ತಯಾರಿಸಿದ್ದಾರೆ ಎಂದು ತನಿಖೆ ಸ್ಪಷ್ಟಪಡಿಸಿದೆ. ಕೈದಿಗಳು ೨ ವಿಭಿನ್ನ ತಂಡಗಳನ್ನು ರಚಿಸಿ ಈ ದಂಧೆಯನ್ನು ನಡೆಸುತ್ತಿದ್ದರು. ಮೊದಲ ತಂಡವು ಕೊಳೆತ ಸೇಬು, ದ್ರಾಕ್ಷಿ, ಹಣ್ಣುಗಳು, ಚಕ್ಕೆ, ಗೋಧಿ, ಸಕ್ಕರೆ ಮುಂತಾದ ಸಾಮಗ್ರಿಗಳನ್ನು ಗುಪ್ತವಾಗಿ ಸಂಗ್ರಹಿಸುತ್ತಿತ್ತು.
ಎರಡನೇ ತಂಡ ಜೈಲಿನ ಬೇಕರಿಯಲ್ಲಿ ಬಳಸುವ ಈಸ್ಟ್ ಅನ್ನು ಕಳ್ಳಬಟ್ಟಿಗೆ ಪೂರೈಕೆ ಮಾಡುತ್ತಿತ್ತು. ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ, ಜೈಲಿನ ಮೂಲೆಗಳಲ್ಲಿ ತಿಂಗಳುಗಟ್ಟಲೆ ಫರ್ಮೆಂಟೇಶನ್‌ಗಾಗಿ ಇಡಲಾಗುತ್ತಿತ್ತು. ನಂತರ ಅದನ್ನು ಚೆನ್ನಾಗಿ ಹಿಂಡಿ, ನೀರಿನ ಬಾಟಲಿಗಳಲ್ಲಿ ತುಂಬಿ ಪಾರ್ಟಿಗಳಲ್ಲಿ ಬಳಸಲಾಗುತ್ತಿತ್ತು. ಕಳ್ಳಬಟ್ಟಿ ಕೇಸ್‌ಗಳಲ್ಲಿ ಈಗಾಗಲೇ ಶಿಕ್ಷೆ ಅನುಭವಿಸುತ್ತಿರುವ ಆರೋಪಿಗಳೇ ಈ ದಂಧೆಯಲ್ಲಿ ಪ್ರಮುಖ ಪಾತ್ರವಹಿಸಿರುವುದು ಗೊತ್ತಾಗಿದೆ.
ತನಿಖಾಧಿಕಾರಿಗಳ ಪ್ರಕಾರ ಕೈದಿಗಳು ವಿಡಿಯೋಗಳನ್ನು ವೈರಲ್ ಮಾಡಲು ೩ ಉದ್ದೇಶಗಳನ್ನು ಹೊಂದಿದ್ದು, ಜೈಲಿನಲ್ಲಿ ನಾವು ಚೆನ್ನಾಗಿದ್ದೇವೆ’ ಎಂಬ ಸAದೇಶವನ್ನು ಕುಟುಂಬದವರಿಗೆ ಕಳುಹಿಸುವುದು. ಸಹಚರರಿಗೆ ವಿಡಿಯೋ ಕಳುಹಿಸಿ ತಮ್ಮ ಪ್ರಭಾವವನ್ನು ತೋರಿಸುವುದು, ಬೆದರಿಕೆ ಹಾಕಿ ಹಣ ವಸೂಲಿ ಮಾಡುವುದು. ವಿಡಿಯೋ ತೋರಿಸಿ ಜೈಲು ಸಿಬ್ಬಂದಿಯನ್ನು ಒತ್ತಡಕ್ಕೆ ಒಳಪಡಿಸಿ, ಜೈಲಿನೊಳಗೆ ತಮ್ಮ ಮನಬಂದಂತೆ ನಡೆಯುವುದಾಗಿತ್ತು.
ಈ ವ್ಯಾಪಕ ಅಕ್ರಮದ ಬಗ್ಗೆ ಗೂಢಚರ ಮಾಹಿತಿ ಇದ್ದರೂ, ಕೆಲ ಜೈಲು ಸಿಬ್ಬಂದಿಗಳು ಕೈದಿಗಳಿಂದ ಹಣ ಪಡೆದು ಮೌನವಾಗಿದ್ದಾರೇ? ಎಂಬ ಅನುಮಾನ ತನಿಖಾಧಿಕಾರಿಗಳನ್ನು ಕಾಡುತ್ತಿದೆ. ದಕ್ಷ ಅಧಿಕಾರಿಯಾಗಿರುವ ದಯಾನಂದ ಅವರು ಎಡಿಜಿಪಿ ಸ್ಥಾನದಲ್ಲಿದ್ದರೂ, ಸುಪ್ರೀಂ ಕೋರ್ಟ್ ಚಾಟಿ ಬೀಸಿದರೂ ಪರಪ್ಪನ ಅಗ್ರಹಾರದ ದಂಧೆಗಳು ನಿಲ್ಲದಿರುವುದು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಜೈಲಿನೊಳಗೆ ಕಳ್ಳಬಟ್ಟಿ ಫ್ಯಾಕ್ಟರಿ ನಡೆದಿರುವುದು ರಾಜ್ಯದ ಬಂಧೀಖಾನೆ ವ್ಯವಸ್ಥೆಯ ಮೇಲೆ ಗಂಭೀರ ಅವಮಾನ ಗಳನ್ನು ಹುಟ್ಟಿಸಿದೆ. ಜೈಲು ಸುಧಾರಣೆಯ ಹೆಸರಿನಲ್ಲಿ ನಡೆಯಬೇಕಾಗಿದ್ದ ವ್ಯವಸ್ಥೆ ಅಕ್ರಮ ಚಟುವಟಿಕೆಗಳ ಗೂಡಾಗಿ ಮಾರ್ಪಟ್ಟಿರುವುದು ಇದೀಗ ಮತ್ತೊಮ್ಮೆ ಸ್ಪಷ್ಟವಾಗಿದೆ.


