ಬೆಂಗಳೂರು : ಕಾರ್ಕಳದ ಬಿಜೆಪಿ ಶಾಸಕ ಮತ್ತು ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಪ್ರತಿಭಟನೆ ಮತ್ತು “ನಾನು ಕರಸೇವಕ, ನನ್ನನ್ನು ಬಂಧಿಸಿ” ಅಭಿಯಾನವನ್ನು ಪ್ರಾರಂಭಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.
1992ರ ಡಿ.6ರಂದು ಅಯೋಧ್ಯೆ ರಾಮಮಂದಿರ ಚಳವಳಿಯಲ್ಲಿ ಭಾಗವಹಿಸಿದ್ದ ನಾನು ಕರಸೇವಕ, ನನ್ನನ್ನು ಬಂಧಿಸಿ ಎಂಬ ಫಲಕ ಹಿಡಿದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಎದುರು ಶಾಸಕ ಸುನೀಲ್ ಕುಮಾರ್ ಏಕಾಂಗಿಯಾಗಿ ಕುಳಿತಿದ್ದರು.
ಪ್ರತಿಭಟನೆ ನಡೆಸಲು ಅನುಮತಿ ಸಿಗದ ಕಾರಣ ಪೊಲೀಸರು ಶಾಸಕ ಸುನೀಲ್ ಕುಮಾರನ್ನು ವಶಕ್ಕೆ ಪಡೆದಿದ್ದಾರೆ.
ರಾಮಜನ್ಮಭೂಮಿ ಆಂದೋಲನದ ವೇಳೆ 31 ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಸೇವಕರಾಗಿದ್ದ ಶ್ರೀಕಾಂತ್ ಪೂಜಾರಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯಾದ್ಯಂತ ಬುಧವಾರ ಪ್ರತಿಭಟನೆ ನಡೆಸಿತು.
ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರಸೇವಕ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿದ್ದರು.
ಈ ಬೆಳವಣಿಗೆಯು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿಯನ್ನು ಮುಖಾಮುಖಿಯಾಗುವಂತೆ ಮಾಡಿದೆ.