ಹಾಸನ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕ್ಷೇತ್ರ ಹಂಚಿಕೆಯೂ ಫೈನಲ್ ಆಗಿದೆ. ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್ ಹಂಚಿಕೆಯ ಸರ್ಕಸ್ ಜೋರಾಗಿದ್ದು ಇತ್ತ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಜೆಡಿಎಸ್ಗೆ ಮೂರು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.
ಈ ಬಗ್ಗೆ ಹಾಸನದಲ್ಲಿ ಸ್ವತಃ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ ಎಂದು ಹೇಳಿದ್ದಾರೆ. ಜೆಡಿಎಸ್ ಕನಿಷ್ಠ ಐದು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಆದ್ರೆ, ಬಿಜೆಪಿ ಹೈಕಮಾಂಡ್ ಅಳೆದುತೂಗಿ ಅಂತಿಮವಾಗಿ ಜೆಡಿಎಸ್ಗೆ ನಿರೀಕ್ಷೆಯಂತೆ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಹಾಸನದಲ್ಲಿ ಈಗಾಗಲೇ ಜೆಡಿಎಸ್ನ ಪ್ರಜ್ವಲ್ ರೇವಣ್ಣ ಸಂಸದರಿದ್ದು, ಈ ಬಾರಿ ಅವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.ಮಂಡ್ಯಕ್ಕೆ ಸಿ.ಎಸ್. ಪುಟ್ಟರಾಜು ಅವರನ್ನು ಅಭ್ಯರ್ಥಿ ಮಾಡುವ ಬಗ್ಗೆ ಕುಮಾರಸ್ವಾಮಿ ಒಲವು ತೋರಿದ್ದಾರೆ ಎನ್ನಲಾಗಿದೆ. ಈಗ ಮಂಡ್ಯದಲ್ಲಿ ಸುಮಲತಾ ಅವರ ಮುಂದಿನ ನಡೆ ಏನು ಎಂಬುದೇ ಸದ್ಯದ ಕುತೂಹಲವಾಗಿದೆ.ಅಗತ್ಯ ಬಿದ್ದರೆ ಸುಮಲತಾ ಅವರ ಬಳಿಯೂ ಮಾತನಾಡುವುದಾಗಿ ಈ ಮುಂಚೆ ಹೇಳಿದ್ದರು ಆದರೆ ಈ ಬಗ್ಗೆ ಕುಮಾರಸ್ವಾಮಿ ಹಾಗೂ ಬಿಜೆಪಿ ವರಿಷ್ಠರು ಸುಮಲತಾ ಅಂಬರೀಶ್ ರವರ ಜೊತೆ ಮಾತುಕತೆನಡೆಸುತ್ತಾರಾ ಎಂಬುದನ್ನು ನೋಡಬೇಕಾಗಿದೆ.
ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭೆ ಕ್ಷೇತ್ರದಿಂದಲೇ ತನಗೆ ಚುನಾವಣೆಗೆ ಸ್ಪರ್ಧೆ ಬಯಸಿದ್ದು, ಬಿಜೆಪಿ ಟಿಕೆಟ್ ಸಿಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಟಿಕೆಟ್ ಸಿಗದಿದ್ದರೆ ʼರೆಬೆಲ್ ಸ್ಟಾರ್ʼ ಆಗುವುದು ಗ್ಯಾರಂಟಿ ಎಂಬ ಸೂಚನೆಯನ್ನು ಈಗಾಗಲೇ ಹಲವು ಬಾರಿ ನೀಡಿದ್ದಾರೆ.ಬಿಜೆಪಿ ಹಾಲಿ ಸಂಸದ ಇರುವ ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ.ಈ ಹಿನ್ನೆಲೆಯಲ್ಲಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿಗೆ ಈ ಬಾರಿ ಟಿಕೆಟ್ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಇನ್ನು ಮಂಡ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್ಗೆ ನಿರಾಸೆಯಾಗಿದ್ದು, ಅವರು ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
5 ವರ್ಷಗಳ ಬಳಿಕ ಮಗ ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಬರುತ್ತಿದ್ದಾರೆ. ಮಂಡ್ಯದಿಂದಲೇ ರಾಜಕೀಯ ಪ್ರವೇಶ ಮಾಡಲು ಅವರು ನಿರ್ಧರಿಸಿದ್ದು ಮಗನ ಭವಿಷ್ಯ ಸುಭದ್ರಪಡಿಸಲು ಸುಮಲತಾ ನಿರ್ಧರಿಸಿದ್ದಾರೆ. ಹೀಗಾಗಿ ಮಂಡ್ಯದಲ್ಲಿಯೇ ರಾಜಕಾರಣ ಮಾಡಲು ತೀರ್ಮಾನಿಸಿದ್ದಾರೆ. ಸದ್ಯ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕರೆಗೆ ಸುಮಲತಾ ಕಾಯುತ್ತಿದ್ದಾರೆ. ಒಂದು ವೇಳೆ ಕೊನೆಯ ಕ್ಷಣದಲ್ಲಿ ಆ ಕರೆ ಬಂದರೆ ಸುಮಲತಾ ನಿಲುವು ಬದಲಾಗುವ ಸಾಧ್ಯತೆಯೂ ಇದೆ. “ನಿಮ್ಮ ಮಗನ ರಾಜಕೀಯ ಏಳಿಗೆ ನಮಗೆ ಬಿಡಿ” ಎಂಬ ಭರವಸೆ ನೀಡಿದರೆ, ಸುಮಲತಾ ಅವರಿಗೆ ರಾಜ್ಯಸಭೆ ಇಲ್ಲವೇ ವಿಧಾನ ಪರಿಷತ್ ಆಫರ್ ಕೊಟ್ಟರೆ, ಕೊನೆಯ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.ಒಟ್ಟಿನಲ್ಲಿ BJP-JDS ಮೈತ್ರಿಯಿಂದ ಹಲವು ಹಾಲಿ ಗೆಲ್ಲುವ ಕುದುರೆಗಳಿಗೆ ನೆಲೆಯಿಲ್ಲದಂತಾಗಿದೆ.