ಬೆಂಗಳೂರು : ಗ್ರಾಹಕರು ದಿನನಿತ್ಯ ಬಳಸುವ ಈರುಳ್ಳಿ ಬೆಳ್ಳುಳ್ಳಿ ಬೆಲೆ ರಾಜ್ಯದಲ್ಲಿ ಹೆಚ್ಚಾಗಿದೆ. ಗ್ರಾಹಕರಿಗೆ ಒಂದರ ಹಿಂದೊಂದರಂತೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಆಗಿ ಕೈ ಸುಡುತ್ತಿವೆ. ಮಾರುಕಟ್ಟೆಯಲ್ಲಿ ನಾಟಿ ಮತ್ತು ಹೈಬ್ರೀಡ್ ಬೆಳ್ಳುಳ್ಳಿ ಬೆಲೆ ಭಾರಿ ಹೆಚ್ಚಳ ಕಂಡಿದೆ. ಇದು ಬೆಲೆ ಏರಿಕೆಯ ಬಿಸಿಗೆ ತತ್ತರಿಸಿರುವ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಬಾರಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿರುವುದು ರಾಜ್ಯದಲ್ಲಿ ಈರುಳ್ಳಿ ಬೆಳ್ಳುಳ್ಳಿ ದರ ಹೆಚ್ಚಳಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಈರುಳ್ಳಿ ಬೆಳೆ ನಾಶವಾಗುತ್ತಿದೆ. ಅತ್ತ ಬೆಳ್ಳುಳ್ಳಿ ಪೂರೈಸುವ ರಾಜ್ಯಗಳಲ್ಲಿಯೂ ಮಳೆಯಿಂದ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇವೆ ಎಂದಿವೆ ಮಾರುಕಟ್ಟೆ ಮೂಲಗಳು ತಿಳಿಸಿವೆ.
ಒಂದು ಕೆಜಿ ಈರುಳ್ಳಿಯ ಬೆಲೆ 60-70 ರೂಪಾಯಿ ಆಗಿದೆ. ಬೆಳ್ಳುಳ್ಳಿ ದರ ಕೆಜಿಗೆ 400 ರೂ. ಗಡಿ ದಾಟಿದ್ರೆ, ಹಬ್ಬದ ವೇಳೆಗೆ ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯಾತೆ ಇದೆ.ಭಾರಿ ಮಳೆಯಿಂದ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ದರ 52 ರೂ. ದಾಟಿದ್ದು, ಸೂಪರ್ ಮಾರ್ಕೆಟ್ ಗಳಲ್ಲಿ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಈರುಳ್ಳಿ, ಬೆಳ್ಳುಳ್ಳಿ ಜತೆಗೆ ತರಕಾರಿಗಳ ಬೆಲೆ ಕೂಡ ಕೊಂಚ ಜಾಸ್ತಿಯಾಗಿದೆ. ಇದೆ ರೀತಿ ಮಳೆ ಜಾಸ್ತಿಯಾದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯಕ್ಕೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದಲೇ ಬೆಳ್ಳುಳ್ಳಿ ಪೂರೈಕೆಯಾಗುತ್ತಿದೆ. ಆ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಬೆಳ್ಳುಳ್ಳಿ ಉತ್ಪಾದನೆ ಕುಸಿತವಾಗಿರುವುದೇ ದರ ಹೆಚ್ಚಳಕ್ಕೆ ಕಾರಣ. ಬೆಳ್ಳುಳ್ಳಿ ದರ ಕೆಜಿಗೆ 450 ರೂ.ವರೆಗೂ ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.