ಬೆಂಗಳೂರು : ರಾಜ್ಯ ಸರ್ಕಾರ ಕರಾವಳಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಗಮನ ನೀಡಿದೆ. ಕಂಬಳ ಸ್ಪರ್ಧೆಗಳಿಗೆ ತಲಾ 5 ಲಕ್ಷ ರೂ. ಗಳ ಅನುದಾನ ನೀಡುವ ಬಗ್ಗೆಯೂ ತೀರ್ಮಾನ ಮಾಡಿದೆ ಎಂದು ಪ್ರವಾಸೋದ್ಯಮ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಗುರುರಾಜಶೆಟ್ಟಿ ಗಂಟಿಹೊಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ಪ್ರವಾಸೋದ್ಯಮ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರಲ್ಲಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗಿದೆ. ಹೀಗಾಗಿ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರುವ ಪ್ರಸ್ತಾವನೆ ಇಲ್ಲ ಎಂದರು.
ರಾಜ್ಯದಲ್ಲಿ 320 ಕಿ.ಮೀ. ಕರಾವಳಿ ಪ್ರದೇಶ ಇದ್ದು, ಸುಮಾರು ಪ್ರತಿವರ್ಷ ಸುಮಾರು 4 ಕೋಟಿ ಪ್ರವಾಸಿಗರು ಕರಾವಳಿಗೆ ಬರುತ್ತಾರೆ. ಹಾಗಾಗಿ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ಕಂಬಳಕ್ಕೆ ತಲಾ 5 ಲಕ್ಷ ರೂ. ಕೊಡುವ ತೀರ್ಮಾನವನ್ನು ಮಾಡಲಾಗಿದೆ ಎಂದು ಹೇಳಿದರು. ಸಿಆರ್‌ಝಡ್ ಸಮಸ್ಸೆಯನ್ನು ಬಗಹೆರಿಸಿ ಕರಾವಳಿ ಪ್ರವಾಸೋದ್ಯಮವನ್ನು ಸಮಗ್ರ ಅಭಿವೃದ್ಧಿ ಮಾಡುವುದಾಗಿ ಅವರು ಹೇಳಿದರು.
ಈ ಹಂತದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಜೆ 7 ಗಂಟೆ ನಂತರ ಮಂಗಳೂರು ಡೆಡ್ ಆಗುತ್ತದೆ. ಯುವಕರಿಗೆ ಮನರಂಜನೆ ಚಟುವಟಿಕೆಗಳು ಇರುವುದಿಲ್ಲ. ಹೀಗಾದಾಗ ಪ್ರವಾಸೋದ್ಯಮದ ಅಭಿವೃದ್ಧಿಯಾಗುವುದಿಲ್ಲ. ಈ ಬಗ್ಗೆ ನಾನು ಮತ್ತು ಪ್ರವಾಸೋದ್ಯಮ ಸಚಿವರು ಕರಾವಳಿ ಭಾಗದ ಶಾಸಕರನ್ನು ಕರೆದು ಮಾತನಾಡಿ, ಮಂಗಳೂರಿನಲ್ಲಿ ರಾತ್ರಿ 7 ಗಂಟೆಯ ನAತರವೂ ಕೆಲವು ಮನರಂಜನೆ ಚಟುಟಿಕೆಗಳನ್ನು ನಡೆಸುವಂತಹ ತೀರ್ಮಾನ ಮಾಡೋಣ ಎಂದು ಹೇಳಿದರು.
ಆಗ ವಿಧಾನಸಭಾಧ್ಯ ಯು.ಟಿ. ಖಾದರ್, ಕರಾವಳಿ ಭಾಗದಲ್ಲಿ ಜನಾಕರ್ಷಣೆಗೆ ಎಲ್ಲ ತರದ ಸೌಲಭ್ಯಗಳಿವೆ. ಶೈಕ್ಷಣಿಕ, ಧಾರ್ಮಿಕ ಈ ರೀತಿ ಎಲ್ಲದಕ್ಕೂ ಅವಕಾಶ ಇದ್ದು ಕರಾವಳಿಯ ನಾವೆಲ್ಲರೂ ಸೌಹಾರ್ದತೆಯ ವಾತಾವರಣಕ್ಕೆ ಕೆಲಸ ಮಾಡಬೇಕು. ಜನ ಕರಾವಳಿಗೆ ಪ್ರೀತಿಯಿಂದ ಬರಬೇಕು. ಹೆದರಿಕೆಯಿಂದ ಬರಬಾರದು. ಆ ರೀತಿಯ ವಾತಾವರಣ ನಿರ್ಮಿಸೋಣ. ಇದು ನಮ್ಮೆಲ್ಲರ ಪ್ರಾಥಮಿಕ ಜವಾಬ್ದಾರಿ ಎಂದು ಕರಾವಳಿ ಭಾಗದ ಶಾಸಕರಿಗೆ ಕಿವಿ ಮಾತು ಹೇಳಿದರು.