ಬೆಂಗಳೂರು ; ಈಗ ರದ್ದಾಗಿರುವ ಚುನಾವಣಾ ಬಾಂಡ್ ಯೋಜನೆ ಮೂಲಕ ಸುಲಿಗೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವಂತೆ ಬೆಂಗಳೂರು ನ್ಯಾಯಾಲಯ ಆದೇಶಿಸಿದೆ. ಜನಾಧಿಕಾರ ಸಂಘರ್ಷ ಸಂಘಟನೆಯಿಂದ ಆದರ್ಶ ಅಯ್ಯರ್ ಅವರು ಸಲ್ಲಿಸಿರುವ ದೂರಿನಲ್ಲಿ ಸೀತಾರಾಮನ್ ಮತ್ತು ಇತರರು ಈ ಯೋಜನೆಯನ್ನು ಸುಲಿಗೆ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಪೊಲೀಸರು ಹಣಕಾಸು ಸಚಿವರು ಮತ್ತು ಇತರ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ತಿಲಕ್‌ನಗರ ಪೊಲೀಸರಿಗೆ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಕಚೇರಿ ಮತ್ತು ಇ.ಡಿ. ಇಲಾಖೆ ವಿರುದ್ಧ ದೂರು ಸಲ್ಲಿಸಲಾಗಿದೆ.
2019 ಏಪ್ರಿಲ್ ತಿಂಗಳಿನಿಂದ 2022ರ ಆಗಸ್ಟ್ ತಿಂಗಳವರೆಗೆ ಉದ್ಯಮಿ ಅನಿಲ್ ಅಗಲ್‌ವಾಲ್ ಅವರ ಸಂಸ್ಥೆಯಿಂದ ಸುಮಾರು 230 ಕೋಟಿ ರುಪಾಯಿ ಮತ್ತು ಅರೊಬಿಂದೋ ಫಾರ್ಮಸಿ ಸಂಸ್ಥೆಯಿಂದ 49 ಕೋಟಿ ರೂ.ನಷ್ಟು ಚುನಾವಣಾ ಬಾಂಡ್ ಗಳ ಮೂಲಕ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
2018 ರಲ್ಲಿ ಕೇಂದ್ರವು ಪರಿಚಯಿಸಿದ ಚುನಾವಣಾ ಬಾಂಡ್‌ಗಳ ಯೋಜನೆಯು ಈ ಬಾಂಡ್‌ಗಳೊಂದಿಗೆ ನಗದು ಕೊಡುಗೆಗಳನ್ನು ಬದಲಿಸುವ ಮೂಲಕ ರಾಜಕೀಯ ದೇಣಿಗೆಗಳಿಗೆ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಫೆಬ್ರವರಿಯಲ್ಲಿ, ಸುಪ್ರೀಂ ಕೋರ್ಟ್ ಈ ಯೋಜನೆಯನ್ನು “ಅಸಂವಿಧಾನಿಕ” ಎಂದು ಬೊಟ್ಟು ಮಾಡಿತು ಮತ್ತು ರಾಜಕೀಯ ನಿಧಿಗೆ ಸಂಬಂಧಿಸಿದಂತೆ ನಾಗರಿಕರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ನನ್ನ ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ರಾಜೀನಾಮೆಗೆ ಸಿಎಂ (ಸಿದ್ದರಾಮಯ್ಯ) ಕೇಳುತ್ತಿದ್ದಾರೆ, ಎಫ್‌ಐಆರ್ ದಾಖಲಿಸುವಂತೆ ಹೇಳಿದ್ದಾರೆ. ಚುನಾವಣಾ ಬಾಂಡ್ ಹಣ ಅವರ ವೈಯಕ್ತಿಕ ಖಾತೆಗೆ ಹೋಗಿದೆಯೇ, ಅವರು ಏಕೆ ರಾಜೀನಾಮೆ ನೀಡಬೇಕು ಮತ್ತು ನಾನೇಕೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.