ಬೆಂಗಳೂರು ; ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಮೈಸೂರು, ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡ, ಶ್ರೀನಿವಾಸ ಪ್ರಸಾದ್ (76) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಸಾದ್ ನಿಧನ ಹೊಂದಿದ್ದಾರೆ. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಕಳೆದ ವಾರ ಏರುಪೇರಾಗಿತ್ತು. ಸೋಮವಾರ ಬೆಳಗಿನ ಜಾವ 1:30ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಬಹು ಅಂಗಾಂಗ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರು ಮೂರು ದಿನಗಳ ಹಿಂದೆ ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಇವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಭಾಗ್ಯಲಕ್ಷ್ಮಿ ಪ್ರಸಾದ್, ಪುತ್ರಿಯರಾದ ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್, ಪೂನಂ ಪ್ರಸಾದ್ ಇದ್ದಾರೆ.
ಶ್ರೀನಿವಾಸ ಪ್ರಸಾದ್ ಅಳಿಯಂದಿರು: ದೇವರಾಜು ಐಆರ್ಎಸ್ ಅಧಿಕಾರಿ, ಹರ್ಷವರ್ಧನ್ ನಂಜನಗೂಡು ಮಾಜಿ ಶಾಸಕ, ಡಾ.ಎನ್.ಎಸ್. ಮೋಹನ್ (ಮೂಳೆ ಮತ್ತು ಕೀಲು ತಜ್ಷ) ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಸ್ವಲ್ಪ ಚೇತರಿಕೆ ಕಂಡಿದ್ದರು. ಎಲ್ಲರ ಜೊತೆ ಚೆನ್ನಾಗಿಯೇ ಮಾತನಾಡಿದ್ದರು. ರವಿವಾರದಿಂದ (ಏ.28) ಮಾತನಾಡಲು ಆಗುತ್ತಿರಲಿಲ್ಲ. ಈ ವೇಳೆ ಪೆನ್ನು ಪೇಪರ್ ಕೊಟ್ಟಿದ್ವಿ. ಆಗ ಪೇಪರ್ನಲ್ಲಿ coffee ಅಂತ ಬರೆದಿದ್ದರು. ಎರಡು ಗುಟುಕು ಕಾಫಿ ಕುಡಿದರು. ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ನಿಧನರಾದರು ಎಂದು ತಿಳಿಸಿದರು.
ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಅವರು ತಮ್ಮ ಜರ್ನಿಯಿಂದಲೇ ನಿವೃತ್ತಿ ತೆಗೆದುಕೊಳ್ಳುತ್ತಾರೆ ಅಂದುಕೊಂಡಿರಲಿಲ್ಲ.ಇದು ಬಹಳ ದುಃಖಕರವಾದ ವಿಷಯ. ಅವರಿಗೆ ಹೈಲಿ ಡಯಾಬಿಟಿಕ್ ಸಮಸ್ಯೆ ಇತ್ತು. 11 ವರ್ಷದ ಹಿಂದೆ ಅವರಿಗೆ ರಿನಲ್ ಟ್ರಾನ್ಸ್ ಪ್ಲಾಂಟ್ ಆಗಿತ್ತು ಎಂದಿದ್ದರು.ಮೈಸೂರಿನ ಜಯಲಕ್ಷ್ಮೀ ಪುರಂ ನಿವಾಸಕ್ಕೆ ಕುಟುಂಬಸ್ಥರು ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೊರಟ್ಟಿದ್ದಾರೆ. ಮೈಸೂರಿನ ವಸ್ತುಪ್ರದರ್ಶನ ಕೇಂದ್ರದಲ್ಲಿ ಸಾರ್ವಜನಿಕದ ದರ್ಶನಕ್ಕೆ ಇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಹಳೇ ಮೈಸೂರು ಭಾಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಶ್ರೀನಿವಾಸ್ ಪ್ರಸಾದ್, ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದರು. ಚಾಮರಾಜನಗರ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಸಾದ್, ಕಳೆದ ಮಾರ್ಚ್ 17 ರಂದು ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.