ಬೆಂಗಳೂರು : ಹಿಂದುತ್ವ ಪರ ಹೋರಾಟಗಾರ ಹಾಗೂ ಗೋ ರಕ್ಷಕ ಪುನಿತ್ ಕೆರೆಹಳ್ಳಿ ಗೂಂಡಾ ಕಾಯ್ದೆಯಡಿ ಜೈಲು ಸೇರಿದ್ದಾರೆ. ಇದೀಗ ಆತನ ಪ್ರಕರಣಗಳನ್ನು ವಾಪಸ್ ಪಡೆದು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 1985ರ ಗೂಂಡಾ ಕಾಯಿದೆಯಡಿ ಪುನಿತ್ ಕೆರೆಹಳ್ಳಿ (32) ಅವರನ್ನು ಬಂಧಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆಗಸ್ಟ್ 11ರಂದು ಆದೇಶ ಹೊರಡಿಸಿದ್ದರು. ಆಗಸ್ಟ್ 17ರಂದು ಆದೇಶಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ಸೂಕ್ತ ಕಾರಣಗಳಿಲ್ಲ ಎಂದು ಸೆಪ್ಟೆಂಬರ್ 13ರ ಆದೇಶದಲ್ಲಿ ಸಲಹಾ ಸಮಿತಿ ಅಭಿಪ್ರಾಯಪಟ್ಟಿತ್ತು. ಅದರಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಕ್ಷಣದಿಂದಲೇ ಜಾರಿಗೆ ಬರುವಂತೆ ಪುನಿತ್ ಕೆರೆಹಳ್ಳಿ ವಿರುದ್ಧದ ಬಂಧನ ವಾರಂಟ್ ಹಿಂಪಡೆದಿದ್ದಾರೆ. ರಾಷ್ಟ್ರ ರಕ್ಷಣಾ ಪಡೆ ನಾಯಕ ಪುನಿತ್ ಕೆರೆಹಳ್ಳಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವ ಕುರಿತು ಕರ್ನಾಟಕ ಹೈಕೋರ್ಟ್ ಆಗಸ್ಟ್ 24 ರಂದು ರಾಜ್ಯ ಸರ್ಕಾರ, ನಗರ ಪೊಲೀಸ್ ಕಮಿಷನರ್ ಮತ್ತು ಸಿಸಿಬಿ ಪೊಲೀಸರಿಗೆ ನೋಟಿಸ್ ಕಳುಹಿಸಿತ್ತು. ಗೂಂಡಾ ಕಾಯ್ದೆಯಡಿ ತನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಪುನಿತ್ ಕೆರೆಹಳ್ಳಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅರ್ಜಿಯ ವಿಚಾರಣೆ ವೇಳೆ ಪುನಿತ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ''ಅರ್ಜಿದಾರ ಪುನಿತ್ ಸಮಾಜ ಸೇವೆಯಲ್ಲಿದ್ದಾರೆ. ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಕಟ್ಟುವ ಮೂಲಕ ಈ ದೇಶದ ರಕ್ಷಣೆಗೆ ಸಮಾನ ಮನಸ್ಕರನ್ನು ಒಗ್ಗೂಡಿಸುತ್ತಿದ್ದಾರೆ. ಆದರೆ, ದುರುದ್ದೇಶದಿಂದ ಕೆಲವರು ಈತನ ಮೇಲೆ ಪ್ರಕರಣ ದಾಖಲಿಸಿದ್ದು, ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ನಗರ ಪೊಲೀಸ್ ಕಮಿಷನರ್ ಯಾವುದೇ ಕಾರ್ಯವಿಧಾನವನ್ನು ಬಳಸದೆ ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶ ಹೊರಡಿಸಿದ್ದರು. ಇದು ಏಕಪಕ್ಷೀಯ ನಡೆ ಮತ್ತು ಹಿಂಪಡೆಯಬೇಕು.