ಬೆಂಗಳೂರು ; ಗುದನಾಳಕ್ಕೆ ಏರ್ ಪ್ರೆಶರ್ ಪೈಪ್ನಿಂದ ಗಾಳಿ ಬಿಟ್ಟ ಪರಿಣಾಮ ಒತ್ತಡ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಛಿದ್ರವಾಗಿ ಯುವಕ ಸಾವನ್ನಪ್ಪಿರುವ ಅಮಾನುಷ ಘಟನೆ ಸಂಪಿಗೆಹಳ್ಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂಪಿಗೆ ಹಳ್ಳಿಯಲ್ಲಿ ಕಳೆದ ಮಾ. 25ರಂದು ನಡೆದ ಘಟನೆಯಲ್ಲಿ ಯೋಗೇಶ್ ಎಂಬಾತ ಸಾವನ್ನಪ್ಪಿದ್ದು, ಮುರುಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಯೋಗೇಶ್ ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಂದೆ ಹಾಗೂ ಅಕ್ಕನೊಂದಿಗೆ ಥಣಿಸಂದ್ರದಲ್ಲಿ ವಾಸವಾಗಿದ್ದು ಬರುವ ಏಪ್ರಿಲ್ನಲ್ಲಿ ಆತನ ಸಹೋದರಿಯ ವಿವಾಹ ನಿಶ್ಚಯವಾಗಿತ್ತು.
ಮದುವೆ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಿದ್ದ ಆತ ಮಾರ್ಚ್ 25 ರ ಸಂಜೆ ಥಣಿಸಂದ್ರದ ಸಿಎನ್ಎಸ್ಕಾ ರ್ ಸ್ಪಾ ಸರ್ವೀಸ್ ಸೆಂಟರ್ಗೆ ಸ್ನೇಹಿತನ ಪಲ್ಸರ್ ಬೈಕ್ ಅನ್ನು ಸರ್ವೀಸ್ ಮಾಡಿಸಲು ಹೋಗಿದ್ದ. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಮುರುಳಿ ಎಂಬಾತ ಯೋಗೇಶ್ಗೆ ಸ್ನೇಹಿತನಾಗಿದ್ದು ಚಡ್ಡಿ ಧರಿಸಿ ನಿಂತಿದ್ದ ಯೋಗೇಶ್ನನ್ನು ನೋಡಿದ ಮುರುಳಿ, ತಮಾಷೆಗಾಗಿ ಹಿಂದಿನಿಂದ ಏಕಾಏಕಿ ಆತನ ಗುದನಾಳಕ್ಕೆ ಏರ್ ಪ್ರೆಶರ್ನಿಂದ ಗಾಳಿ ಬಿಟ್ಟಿದ್ದಾನೆ.
ಗಾಳಿಯ ಒತ್ತಡ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಸ್ಫೋಟಗೊಂಡು ಯೋಗೇಶ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಮುರುಳಿ ಹಾಗೂ ಇನ್ನಿತರರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಐಪಿಸಿ ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಿಕೊಂಡು ಮುರುಳಿಯನ್ನು ಬಂಧಿಸಿರುವ ಸಂಪಿಗೆ ಹಳ್ಳಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.