ಬೆಂಗಳೂರು : ಮಾಜಿ ಸಚಿವ ಮುನಿರತ್ನ ವಿರುದ್ಧ ಗುತ್ತಿಗೆದಾರ ಚೆಲುವರಾಜು ಎಂಬುವವರು ಜೀವ ಬೆದರಿಕೆ ಆರೋಪ ಮಾಡಿ ದೂರು ನೀಡಿದ್ದರು. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಕೋಲಾರದ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ವಶಕ್ಕೆ ಪಡೆಯಲಾಗಿದೆ. ಕೋಲಾರದಿಂದ ಆಂಧ್ರದ ಚಿತ್ತೂರಿಗೆ ತೆರಳುತ್ತಿದ್ದ ಮುನಿರತ್ನ ಅವರನ್ನು ಮೊಬೈಲ್ ಫೋನ್ ಲೊಕೇಷನ್ ಆಧರಿಸಿ ಪತ್ತೆ ಮಾಡಲಾಗಿದೆ. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಕೇಸ್ ದಾಖಲಾದಾಗಿನಿಂದ ಮುನಿರತ್ನ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ಸದ್ಯ ಮುನಿರತ್ನರನ್ನು ವಶಕ್ಕೆ ಪಡೆದಿರುವ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆಂದು ತಿಳಿದುಬಂದಿದೆ.
ಜೀವ ಬೆದರಿಕೆ ಆರೋಪದ ಜೊತೆಗೆ ಶಾಸಕ ಮುನಿರತ್ನ ವಿರುದ್ಧ ವೇಲು ನಾಯ್ಕರ್ರಿಂದ ಜಾತಿ ನಿಂದನೆ ಆರೋಪ ಕೇಳಿ ಬಂದಿತ್ತು. ಜಾತಿ ನಿಂದನೆ ಆರೋಪದಲ್ಲೂ ಮತ್ತೊಂದು ಕೇಸ್ ದಾಖಲಾಗಿದೆ. ಶಾಸಕ ಮುನಿರತ್ನ ವಿರುದ್ಧ ಜೀವ ಬೆದರಿಕೆ ಆರೋಪದಲ್ಲಿ ಗುತ್ತಿಗೆದಾರ ಚೆಲುವರಾಜು ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿತ್ತು. ಜೀವ ಬೆದರಿಕೆ ಕೇಸ್ನಲ್ಲಿ ಎ1 – ಮುನಿರತ್ನ, ಮಾಜಿ ಸಚಿವ, ಎ2 – ವಿ.ಜಿ. ಕುಮಾರ್, ಆಪ್ತ ಸಹಾಯಕ, ಎ3 – ಅಭಿಷೇಕ್, ಸೆಕ್ಯೂರಿಟಿ, ಎ4 – ವಸಂತ್ ಕುಮಾರ್ ವಿರುದ್ಧ ಕೇಸ್ ಹಾಕಲಾಗಿದೆ.
ಮುನಿರತ್ನ ವಿರುದ್ಧದ ಪ್ರಕರಣ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಮುನಿರತ್ನ ಪ್ರಕರಣ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ್ದಾರೆ. ಆದರೆ ಬೆದರಿಕೆ ಹಾಕಿದ್ದಕ್ಕೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಕೂಡ ವೈರಲ್ ಆಗಿತ್ತು. ಗುತ್ತಿಗೆದಾರ ಚಲುವರಾಜುಗೆ ಬೆದರಿಕೆ ಹಾಕಿದ್ದು ಆಡಿಯೊದಲ್ಲಿ ಕೇಳಿಬಂದಿತ್ತು. ಆದರೆ, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಮುನಿರತ್ನ, ಆಡಿಯೋ ತಮ್ಮದಲ್ಲ. ಒಂದು ವೇಳೆ, ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರ ಉಂಟಾಗಿದ್ದು ಇನ್ನೂ ಹಲವಾರು ನಾಯಕರು ಬಂಧನದ ಭೀತಿಯಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.
ಬಂಧನ ಬಳಿಕ ಬಿಜೆಪಿ ಶಾಸಕ ಮುನಿರತ್ನ ಮಂಕಾಗಿದ್ದರು. ಶನಿವಾರ ಸಂಜೆ ಏನೂ ಮಾತನಾಡದೆ ಮೌನಕ್ಕೆ ಜಾರಿದ್ದರು. ಪೊಲೀಸರು ಶಾಸಕ ಮುನಿರತ್ನ ಅವರನ್ನು ಅಶೋಕ್ನಗರ ಠಾಣೆಗೆ ಕರೆತಂದರು. ಮಧ್ಯರಾತ್ರಿ 12 ರಿಂದ 1.30ರವರೆಗೆ ಸತತ ಒಂದುವರೆ ಗಂಟೆಗಳ ಕಾಲ ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ವಿಚಾರಣೆ ನಡೆಸಿದರು.
ತನಿಖಾಧಿಕಾರಿಗಳ ಪ್ರಶ್ನೆಗೆ ಶಾಸಕ ಮುನಿರತ್ನ ನಾನೇನು ಮಾಡಿಲ್ಲ, ಷಡ್ಯಂತ್ರ ಅಂತ ಉತ್ತರ ನೀಡಿದ್ದಾರೆ. ನ್ಯಾಯಾದೀಶರ ಮುಂದೆಯೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಅಂತ ಮುನಿರತ್ನ ಹೇಳಿದ್ದಾರೆ ಎಂದು ಮಾಹಿತಿ ದೊರೆತಿದೆ.


