ಬೆಂಗಳೂರು : ರಾಜ್ಯದಲ್ಲಿ ಈರುಳ್ಳಿ ಸಾಮಾನ್ಯ ಜನರ ಕಣ್ಣಲ್ಲಿ ನೀರು ತರಿಸುತ್ತಿದೆ. ಪ್ರತಿನಿತ್ಯ ಅಡುಗೆ ಮಾಡಲು ಈರುಳ್ಳಿ ಅತ್ಯವಶ್ಯಕ. ಆದರೆ ದಿನದಿಂದ ದಿನಕ್ಕೆ ಈರುಳ್ಳಿ ದರ ಗಗನಕ್ಕೇರುತ್ತಿದೆ. ಇದರಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಈಗ ಪ್ರತಿ ಕೆಜಿ ಈರುಳ್ಳಿ ದರ 70 ರೂ.ನಿಂದ 80 ರೂ.ಗೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ100 ರೂ. ಗಡಿ ದಾಟುವ ಆತಂಕ ಎದುರಾಗಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು,ಬಡವರು, ಮಧ್ಯಮ ವರ್ಗದವರ ಜೀವನ ದುಸ್ತರವಾಗಿದೆ. ಇದರ ಬೆನ್ನಲ್ಲೆ ಈರುಳ್ಳಿ ದರ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದಲ್ಲಿ ಮಳೆ ಇಳಿಕೆಯಾಗಿದ್ದರೂ ಈರುಳ್ಳಿ ಧಾರಣೆ ಮಾತ್ರ ಕಡಿಮೆಯಾಗುತ್ತಿಲ್ಲ. ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ನೀರು ಪಾಲಾಗಿದ್ದು, ಇದರಿಂದಲೇ ಈರುಳ್ಳಿ ದರ ದುಬಾರಿಯಾಗಲು ಪ್ರಮುಖ ಕಾರಣವಾಗಿದೆ.
ಪ್ರತಿ ಕೆಜಿ ಈರುಳ್ಳಿಗೆ 50 ರೂ. ಇತ್ತು. ಈಗ 60 ರಿಂದ 80 ರೂ. ಗೆ ಹೆಚ್ಚಾಗಿದೆ. ಅಷ್ಟೇ ಅಲ್ಲ ಕಳೆದ 3 ತಿಂಗಳಿAದ ಈರುಳ್ಳಿ ಬೆಲೆ ಗ್ರಾಹಕರ ಕೈ ಸುಡುತ್ತಿದೆ. ಮಳೆ ಇಲ್ಲದಿದ್ದರೂ 70 ರೂ. ಗಡಿ ದಾಟಿದೆ. ಭಾರಿ ಮಳೆಯಿಂದಾಗಿ ಈರುಳ್ಳಿ ಬೆಲೆ ನೆಲ ಕಚ್ಚಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಈರುಳ್ಳಿ ಬರುತ್ತಿಲ್ಲ.ಈಗ ಬರುತ್ತಿರುವ ಈರುಳ್ಳಿಯ ಗುಣಮಟ್ಟ ಚೆನ್ನಾಗಿಲ್ಲ.ಈರುಳ್ಳಿಯನ್ನು ಮಹಾರಾಷ್ಟçದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದರೂ ನಿರೀಕ್ಷೆಯಷ್ಟು ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಇದು ಈರುಳ್ಳಿ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಬೆಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ 100,480 ಚೀಲ ಈರುಳ್ಳಿ ಬಂದಿದ್ದು, ಈ ಪೈಕಿ ಮಹಾರಾಷ್ಟçದಿಂದ 8 ರಿಂದ 10 ಲಾರಿ ಉತ್ತಮ ಗುಣಮಟ್ಟದ ಹಳೆಯ ದಾಸ್ತಾನು ಈರುಳ್ಳಿ ಬಂದಿದೆ. ಉನ್ನತ ದರ್ಜೆಯ ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ 7,200 ರಿಂದ 7,500 ರೂ.ಗಳಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಕಡಿಮೆ ಗುಣಮಟ್ಟದ ಸ್ಥಳೀಯ ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ 1,500 ರಿಂದ 5,500 ರೂ.ವರೆಗೆ ಮಾರಾಟವಾಗುತ್ತಿದೆ.