ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಭಾರಿ ದುರಂತ ಸಂಭವಿಸಿದ್ದು ಏಕೆ? ಈ ದುರಂತ ಕೆಎಸ್‌ಸಿಎ ಆಡಳಿತ ಮಂಡಳಿ ಕೈಗೊಂಡ ಅವೈಜ್ಞಾನಿಕ ನಿರ್ಧಾರದಿಂದ ಆಯಿತೇ ಎಂಬ ಅಂಶ ಈಗ ಚರ್ಚೆಗೆ ಗ್ರಾಸವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ 21 ಗೇಟ್‌ಗಳನ್ನು ಸಂಜೆ 4.3೦ರವರೆಗೆ ಬಂದ್ ಇಟ್ಟಿದ್ದೇ ಇಡೀ ದುರಂತಕ್ಕೆ ಕಾರಣ ಎಂದು ಸರಕಾರದ ಪ್ರಾಥಮಿಕ ವರದಿಗಳು ತಿಳಿಸಿವೆ.
ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ವಿಕ್ಟರಿ ಪರೇಡ್ ನಡೆಸಲಾಗುತ್ತದೆ ಎಂಬ ಸುದ್ದಿ ಬುಧವಾರ ಬೆಳಗ್ಗೆಯಿಂದಲೇ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಕೆಎಸ್‌ಸಿಎ ಕೂಡ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸನ್ಮಾನ ಸಮಾರಂಭ ಏರ್ಪಡಿಸಿತ್ತು. ಹೀಗಾಗಿ ವಿಧಾನಸೌಧದ ಎದುರು ಸರಿಸುಮಾರು ಒಂದೂವರೆ ಲಕ್ಷ ಜನರು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಸರಿಸುಮಾರು 3 ಲಕ್ಷ ಜನರು ನೆರೆದಿದ್ದರು. ಆದರೆ ಸಂಜೆಯವರೆಗೂ ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ಜನರಿಗೆ ತಲುಪದೇ ಇದ್ದುದರಿಂದ ಜನರು ವಿಧಾನಸೌಧ ಮತ್ತು ಸ್ಟೇಡಿಯಂ ನಡುವೆ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಲೇ ಇದ್ದದ್ದು ದುರಂತಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಮಧ್ಯೆ ಕೆಎಸ್‌ಸಿಎ ಆಡಳಿತ ಮಂಡಳಿ ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ 21 ಗೇಟ್‌ಗಳನ್ನು ಬೆಳಗ್ಗೆಯಿಂದಲೇ ಬಂದ್ ಇಟ್ಟಿತ್ತು. ಕೇವಲ ಮುಖ್ಯದ್ವಾರದಲ್ಲಿ ವಿಐಪಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿತ್ತು. ಅಲ್ಲದೇ ಟಿಕೆಟ್ ಜೀನಿ ಎಂಬ ಖಾಸಗಿ ಆ್ಯಪ್ ಮುಖಾಂತರ 35 ಸಾವಿರ ಪ್ರವೇಶ ಟಿಕೆಟ್‌ಗಳನ್ನು ಹಂಚಿಕೆ ಮಾಡಿತ್ತು. ಆದರೆ ಖಾಸಗಿ ಆ್ಯಪ್ ಮುಖಾಂತರ ಟಿಕೆಟ್ ಕೊಡಲಾಗಿದೆ ಎಂಬ ವಿಷಯ ಮಧ್ಯಾಹ್ನದವರೆಗೂ ಅನೇಕರಿಗೆ ಗೊತ್ತೇ ಇರಲಿಲ್ಲ. ಹೀಗಾಗಿ ಮುಕ್ತ ಪ್ರವೇಶವಿದೆ ಎಂದೇ ಭಾವಿಸಿದ್ದ ಜನರು ಹಿಂಡುಹಿAಡಾಗಿ ಸ್ಟೇಡಿಯಂನತ್ತ ನುಗ್ಗಿ ಬರುತ್ತಿದ್ದರು.
ಏಕಾಏಕಿ ಗೇಟ್ ತೆರೆದರು!: ಮಧ್ಯಾಹ್ನ 4.30ರ ಆಸುಪಾಸಿನಲ್ಲಿ ಕೆಎಸ್‌ಸಿಎ ಆಡಳಿತ ಮಂಡಳಿ ಚಿನ್ನಸ್ವಾಮಿ ಸ್ಟೇಡಿಯಂನ 8 ರಿಂದ 10 ಗೇಟ್‌ಗಳನ್ನು ತೆರೆಯಲು ಮುಂದಾಯಿತು. ಆದರೆ ಇಷ್ಟೊತ್ತಿಗಾಗಲೇ ರಸ್ತೆಯಲ್ಲಿ ನೆರೆದಿದ್ದ ಸರಿಸುಮಾರು 3 ಲಕ್ಷ ಜನರು ಸಹನೆ ಕಳೆದುಕೊಂಡಿದ್ದರು. ಸಾಲದ್ದಕ್ಕೆ ಗೇಟ್ ನಂಬರ್ 12 ರ ಬಳಿ ಫುಟ್‌ಪಾತ್ ಮೇಲಿದ್ದ ಚರಂಡಿಯ ಸ್ಲಾಬ್ ಕುಸಿದ ಪರಿಣಾಮ ನೂರಾರು ಜನರು ಕುಸಿದು ಬಿದ್ದರು. ಇದು ಕಾಲ್ತುಳಿತಕ್ಕೆ ಮೊದಲ ಕಾರಣವಾಯಿತು. ಅದೇ ವೇಳೆಗೆ ಗೇಟ್ ತೆರೆದಿದ್ದರಿಂದ ಜನರು ಸ್ಟೇಡಿಯಂ ಒಳಗೆ ನುಗ್ಗಲು ಯತ್ನಿಸಿದರು. ಆಗ ಕಾಲ್ತುಳಿತ ಇತರ ಗೇಟ್‌ಗಳಿಗೂ ವ್ಯಾಪಿಸಿತು. ಏಕೆಂದರೆ ಒಂದು ಗೇಟ್‌ನಿಂದ ಮತ್ತೊಂದು ಗೇಟ್ ಕಡೆಗೆ ಜನರು ನುಗ್ಗಲು ಆರಂಭಿಸಿದರು. ಈ ನೂಕಾಟದಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ತೊಂದರೆಗೆ ಸಿಲುಕಿದರು. ಎಲ್ಲ ಗೇಟ್‌ಗಳನ್ನು ತೆರೆಯದೇ
ಯಾವುದೇ ಮುಂಗಡ ಮಾಹಿತಿ ಇಲ್ಲದೇ ಕೆಲವೇ ಗೇಟ್‌ಗಳನ್ನು ತೆರೆದ ಪರಿಣಾಮ ಜನರು ಧಾವಂತದಲ್ಲಿ ನೂಕಾಟ ಆರಂಭಿಸಿದರು.
ಟಿಕೆಟ್ ಇದ್ದವರ ಜತೆಗೆ ಟಿಕೆಟ್ ಇಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿAದ ಪೊಲೀಸರು ಯಾರನ್ನೂ ನಿಗ್ರಹಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ.ಒಂದು ವೇಳೆ ಮಧ್ಯಾಹ್ನ 1 ಗಂಟೆಯಿAದಲೇ ಕ್ಯೂನಲ್ಲಿ ನಿಲ್ಲಿಸಿ, ಟಿಕೆಟ್ ಇದ್ದವರನ್ನು ಮಾತ್ರ ಸ್ಟೇಡಿಯಂ ಒಳಗೆ ಬಿಡುವ ಯೋಜನೆ ರೂಪಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಹೆಸರು ಹೇಳದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ಪಂದ್ಯ ನಡೆಯುವಾಗ ಸಾಕಷ್ಟು ಮೊದಲೇ ಟಿಕೆಟ್ ಇದ್ದವರನ್ನು ಕ್ಯೂನಲ್ಲಿ ನಿಲ್ಲಿಸಿ ಒಳಗೆ ಬಿಡಲಾಗುತ್ತದೆ. ಆಗಲೂ ಸಹಿತ ೪೦ರಿಂದ ೫೦ ಸಾವಿರ ಜನರು ಸೇರಿದರೂ ಕ್ಯೂ ಪದ್ಧತಿಯಲ್ಲಿ ಸಾಕಷ್ಟು ಮುಂಚಿತವಾಗಿ ಸ್ಟೇಡಿಯಂ ಒಳಗೆ ಪ್ರವೇಶ ನೀಡುವುದರಿಂದ ನೂಕುನುಗ್ಗಲು ಸಂಭವಿಸುವುದಿಲ್ಲ. ಆದರೆ ಬುಧವಾರ ಮಾತ್ರ ವಿಜಯೋತ್ಸವ ಕಾರ್ಯಕ್ರಮಕ್ಕೆ ತುಂಬಾ ತಡವಾಗಿ ಗೇಟ್ ತೆರೆಯಲಾಯಿತು. ಇದರಿಂದ ಹೊರಗಿದ್ದ ಜನರು ಸಹನೆ ಕಳೆದುಕೊಂಡು ನೂಕಾಟ ನಡೆಸಿದರು ಎಂಬ ಅಭಿಪ್ರಾಯ ಕೇಳಿಬಂದಿದೆ.
ಪೊಲೀಸ್ ನಿಯೋಜನೆಯಲ್ಲೂ ದ್ವಂದ್ವ ವಿಧಾನಸೌಧ ಮತ್ತು ಕ್ರಿಕೆಟ್ ಸ್ಟೇಡಿಯಂ ನಡುವೆ ಕೇವಲ ಒಂದೂವರೆ ಕಿಮೀ ಅಂತರವಿದೆ. ಇಷ್ಟು ಅಂತರದಲ್ಲಿ ಸುಮಾರು 4-5 ಲಕ್ಷ ಜನರು ಸೇರ್ಪಡೆಗೊಂಡಿದ್ದರು. ಇಷ್ಟೊAದು ಸಂಖ್ಯೆಯ ಜನರ ನಿಯಂತ್ರಣಕ್ಕೆ ಪೊಲೀಸರ ನಿಯೋಜನೆ ಕೂಡ ಬಹುದೊಡ್ಡ ದ್ವಂದ್ವವಾಗಿ ಪರಿಣಮಿಸಿತು. ಮಹಿಳಾ ಪೊಲೀಸ್ ಪೇದೆಗಳ ಸಂಖ್ಯೆಯAತೂ ತೀರಾ ಕಡಿಮೆ ಇತ್ತು. ಇದರಿಂದ ಮಹಿಳೆಯರು ಮತ್ತು ಮಕ್ಕಳನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಯಿತು. ಅಲ್ಲದೇ ಕೇವಲ ಒಂದು ಗಂಟೆ ಅಂತರದಲ್ಲಿ ಎರಡು ಕಡೆ ಕಾರ್ಯಕ್ರಮ ನಿಗದಿ ಆಗಿದ್ದರಿಂದ ಪೊಲೀಸರ ನಿಯೋಜನೆ ಸಮರ್ಪಕವಾಗಿ ಹಂಚಿಕೆ ಆಗಿರಲಿಲ್ಲ ಎಂಬ ವಾದವೂ ಕೇಳಿಬಂದಿದೆ