ಬೆಂಗಳೂರು : ಕೊಲೆ ಆರೋಪಿ ದರ್ಶನ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇವತ್ತು ಬೆಳಗ್ಗೆ ಬೆಂಗಳೂರು ಪೊಲೀಸರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ತೂಗುದೀಪ ದರ್ಶನ್ ಅವರನ್ನು ಬಳ್ಳಾರಿಗೆ ಕರೆತಂದಾಗ ನಟನನ್ನು ನೋಡಲು ಬಳ್ಳಾರಿಯ ಜನ ರಸ್ತೆಗಳಲ್ಲಿ ನೆರೆದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜನರನ್ನು ರಸ್ತೆಗಳಿಂದ ದೂರ ಸರಿಸಲು ಬಳ್ಳಾರಿ ಪೊಲೀಸರು ಹರಸಾಹಸ ಪಡಬೇಕಾಯಿತು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಹಾಗೂ ಅಶಿಸ್ತಿನ ಕಾರಣದಿಂದ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ನಟ ದರ್ಶನ್ ಹಾಗೂ ಆತನ ಗ್ಯಾಂಗ್‌ನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ. ಈ ಪೈಕಿ ನಟ ದರ್ಶನ್‌ನ್ನು ಪೊಲೀಸರು ಬಳ್ಳಾರಿ ಜೈಲಿಗೆ ಕರೆ ತಂದಿದ್ದಾರೆ. ಜೈಲು ಪ್ರವೇಶಿಸುತ್ತಿದ್ದಂತೆ ದರ್ಶನ್ ಸಂಕಷ್ಟ ಡಬಲ್ ಆಗಿದೆ. ಜೈಲಿನ ಒಳಗೆ ಬರುತ್ತಿದ್ದಂತೆ ಕೈಯಲ್ಲಿದ್ದ ದಾರ, ಕುತ್ತಿಗೆಯ ಚೈನ್, ಕಡಗವನ್ನು ಪೊಲೀಸರು ಬಿಚ್ಚಿಸಿದ್ದಾರೆ.
ಇಂದು ಚಿಕ್ಕಬಳ್ಳಾಪುರ, ಬಾಗೆಪಲ್ಲಿ, ಅನಂತಪುರ ಮಾರ್ಗವಾಗಿ ಬಳ್ಳಾರಿ ಕರೆ ತರಲಾಗಿದೆ. ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿಗೆ ತರಲಾಯಿತು.ಬೆಳಗ್ಗೆ 4 ಗಂಟೆಯ ವೇಳೆಗೆ ಪರಪ್ಪನ ಅಗ್ರಹಾರದಿಂದ ಹೊರಟ ವಾಹನ ಮೇಕ್ರಿ ವೃತ್ತ, ಹೆಬ್ಬಾಳ ರಸ್ತೆ, ಯಲಹಂಕ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬಳ್ಳಾರಿಯತ್ತ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಗಿತ್ತು. ಟೀ ಶರ್ಟ್, ಜೀನ್ಸ್, ಬೆಡ್ ಶೀಟ್ ಹಿಡಿದುಕೊಂಡು ದರ್ಶನ್ ಜೈಲು ಪ್ರವೇಶಿಸಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೊತೆ ಅರೆಸ್ಟ್ ಆಗಿರುವ ಇತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಲಾಂತರಿಸಲಾಗಿದೆ. ಆರೋಪಿ ಧನರಾಜ್ ಕೇಂದ್ರ ಕಾರಾಗೃಹ ಧಾರವಾಡಕ್ಕೆ ಸ್ಥಳಾಂರಿಸಲಾಗಿದೆ. ಎ6 ಆರೋಪಿ ಜಗದೀಶ್, ಎ12 ಆರೋಪಿ ಲಕ್ಷ್ಮಣ್ ನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ. ಒಟ್ಟಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಗೆ ರೇಣುಕಾ ಸ್ವಾಮಿ ಕೊಲೆ ನೆಲೆಯನ್ನೇ ಕಳೆದುಕೊಂಡಂತಾಗಿದೆ.