ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಅವರು ಬದುಕಿದ್ದರೆ 49ನೇ ಹುಟ್ಟುಹಬ್ಬದ ಸಂಭ್ರಮ. ಅವರಿಲ್ಲದ ಮೂರನೇ ವರ್ಷದ ಆಚರಣೆ.
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವನ್ನು ರಾಜ್ಯ ಸರ್ಕಾರ ಸ್ಪೂರ್ತಿಯ ದಿನವನ್ನಾಗಿ ಘೋಷಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಜನಸಾಗರ ಹರಿದು ಬಂದಿದೆ.
ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಮಕ್ಕಳು, ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಟರಾದ ವಿನಯ್ ರಾಜ್ಕುಮಾರ್ ಮತ್ತು ಯುವ ರಾಜ್ ಕುಮಾರ್ ಅವರು ಬೆಳ್ಳಂಬೆಳಗ್ಗೆ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಚಿಕ್ಕಪ್ಪನ ಸಮಾಧಿಗೆ ಪೂಜೆ ಮಾಡಿ ನಮನ ಸಲ್ಲಿಸಿದರು. ಬಳಿಕ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪರಸ್ಪರ ಸಿಹಿ ತಿನ್ನಿಸಿ ಈ ಮೂಲಕ ಪುನೀತ್ರಾಜ್ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಕೋರಿದರು.
ಅಭಿಮಾನಿಗಳ ಜನಸಾಗರ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ಅಭಿಮಾನಿಗಳು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಕೋರಿದರು.
ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ಜನಸಾಗರವೇ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಈ ಮೂಲಕ ಪುನೀತ್ ರಾಜಕುಮಾರ್ ಅವರಿಗೆ ಶುಭಕೋರಿದರು.
ಜಾಕಿ ಮರು ಬಿಡುಗಡೆ: ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ15 ವರ್ಷಗಳ ಹಿಂದೆ ತೆರೆಗೆ ಬಂದು ಯಶಸ್ವಿಯಾಗಿದ್ದ ಜಾಕಿ ಚಿತ್ರವನ್ನು ಮರು ಬಿಡುಗಡೆ ಮಾಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಮಮಂದರಿಗಳು ತುಂಬಿ ತುಳುಕುತ್ತಿದ್ದ ಈ ಮೂಲಕ ಪುನೀತ್ ರಾಜ್ ಕುಮಾರ್ ಅವರ ಕ್ರೇಜ್ ಕಿಂಚಿತ್ತೂ ಕಡಿಮೆ ಯಾಗಿಲ್ಲ ಎನ್ನುವುದನ್ನು ಅಭಿಮಾನಿಗಳು ನಿರೂಪಿಸಿದ್ದಾರೆ.
ಈ ನಡುವೆ ದೊಡ್ಮನೆ ಕುಟುಂಬದ ಕುಡಿ ಯುವ ರಾಜ್ಕುಮಾರ್ ನಟಿಸಿರುವ ಬಹುನಿರೀಕ್ಷಿತ ಚಿತ್ರ “ಯುವ” ತಿಂಗಳಾಂತ್ಯಕ್ಕೆ ತೆರೆಗೆ ಬರುತ್ತಿದ್ದು ಅಭಿಮಾನಿಗಳು ಯುವನ ಮೂಲಕ ಪುನೀತ್ ರಾಜ್ಕುಮಾರ್ ಅವರನ್ನು ನೋಡಲು ಕಾತುರರಾಗಿದ್ದಾರೆ.