ಬೆಂಗಳೂರು : ಕರಾವಳಿ ಕಂಬಳ ಹಾಗೂ ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡುವ ಕುರಿತು ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿದೆ. ಇದು ಜನ-ಜೀವನದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ನ್ಯಾಯಾಂಗವು ಇದನ್ನು ವಿಭಿನ್ನ ದೃಷ್ಠಿಕೋನದಿಂದ ನೋಡಲು ಸಾಧ್ಯವಿಲ್ಲ ಎನ್ನುವುದಾಗಿ ಅಭಿಪ್ರಾಯಪಟ್ಟಿದೆ.
ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ.
ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕ್ರೀಡೆ ನಡೆಯುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳುಮೆಗಾಗಿ ಕೋಣ ಬಳಸುವುದು ಸಾಮಾನ್ಯ.ಅವುಗಳಲ್ಲಿ ಬಲಿಷ್ಠವಾದವುಗಳ ಮಧ್ಯೆ ಓಟದ ಸ್ಪರ್ಧೆ ಏರ್ಪಡಿಸಿ ವಿಜೇತರಾದವರನ್ನು ಸನ್ಮಾನಿಸುವದರ ಹಿಂದೆ ಕೃಷಿಕರ ಕ್ರೀಡಾ ಮನೋಭಾವಕ್ಕೆ ಇಂಬು ಕೊಡುವ ಉದ್ದಿಶ್ಯ ಸ್ಪಷ್ಟ. ಅಂತೆಯೇ ಕೋಣಗಳನ್ನು ಚೆನ್ನಾಗಿ ಸಲಹಲು ಇದೊಂದು ನೆವವೂ ಹೌದು.
ಈ ಭಾಗದ ಜನರ ಜೀವನಾಡಿಯಾಗಿದ್ದ ಕಂಬಳ ಕ್ರೀಡೆಗೆ ಆಕ್ಷೇಪ ವ್ಯಕ್ತವಾಗಿ ನ್ಯಾಯಾಂಗದ ಮೆಟ್ಟಿಲೇರಿತ್ತು.2016 ರಲ್ಲಿ ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದಾಗ ಪ್ರಥಮವಾಗಿ ಕಂಬಳದ ಕುರಿತು ಧ್ವನಿಯಾಗಿ ನ್ಯಾಯಾಲಯದಲ್ಲಿ ಹೋರಾಡಿ ಕಂಬಳದ ಪರವಾಗಿ ವಕಾಲತ್ತು ವಹಿಸಿದವರು ಕೊರ್ಗಿ ಹೊಸಮಠದ ಪವನಚಂದ್ರ ಶೆಟ್ಟಿಯವರು.ಅಂದು ಪ್ರಾರಂಭಗೊಂಡ ಅವರ ಹೋರಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.ಛಲಬಿಡದ ತ್ರಿವಿಕ್ರಮನಂತೆ ಅವರು ನಡೆಸಿದ ಹೋರಾಟಕ್ಕೆ ಈ ದಿನ ಸಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡುವ ಮೂಲಕ ಕರಾವಳಿಯ ಸಾಂಸ್ಕೃತಿಕ ಪರಂಪರೆ ಮತ್ತೆ ಎತ್ತಿಹಿಡಿದಿದ್ದಾರೆ.

ಕಂಬಳ ಪ್ರೀಯರು ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠದ ಐತಿಹಾಸಿಕ ತೀರ್ಪಿಗೆ ಹೋರಾಟ ನಡೆಸಿದ ನ್ಯಾಯವಾದಿ ಪವನಚಂದ್ರ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.


