ಬೆಂಗಳೂರು : ಕಮಲ ಪಾಳಯದಲ್ಲಿ ಲೋಕಸಭೆ ಟಿಕೆಟ್ ಗಾಗಿ ಕಾದಾಟ ನಡೆಯುತ್ತಿದ್ದು ಯಾರಿಗೆ ಸಿಗುತ್ತೆ ಯಾರಿಗೆ ಸಿಗಲ್ಲ ಎಂಬುದು ದೊಡ್ಡ ಟೆನ್ಷನ್ ಶುರುವಾಗಿದೆ. ಅದರಲ್ಲೂ ಕರ್ನಾಟಕದ ಟಿಕೆಟ್ ಹಂಚಿಕೆ ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಕರ್ನಾಟಕ ಕ್ಷೇತ್ರ ಹಂಚಿಕೆ, ಟಿಕೆಟ್ ಅಂತಿಮಗೊಳಿಸುವ ಸಂಬಂಧ ಕಸರತ್ತು ನಡೀತಿದೆ. ಹಲವು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗೋ ಭೀತಿ ಇದ್ದು ಢವಢವ ಶುರುವಾಗಿದೆ. ಅದರಲ್ಲೂ ಪ್ರತಾಪ್ ಸಿಂಹ ಕತ್ತಿಯ ಅಂಚಿನಲ್ಲಿ ಬಂದು ನಿಂತಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ ಇನ್ನಿತರ ಕಡೆ ಅಲ್ಲಿನ ರಾಜವಂಶಸ್ಥರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡಿರುವ ಬಿಜೆಪಿ ಮೈಸೂರಿನಲ್ಲೂ ಇದೇ ಪ್ರಯೋಗಕ್ಕೆ ಮುಂದಾಗುವ ಲಕ್ಷಣಗಳಿವೆ. ಮೈಸೂರು ಕೊಡಗು ಸಂಸದ ಪ್ರತಾಪ್‌ಸಿಂಹ ಅವರಿಗೆ ಈ ಬಾರಿ ಅವಕಾಶ ನಿರಾಕರಿಸಿ, ರಾಜವಂಶಸ್ಥ ಯದುವೀರ ಒಡೆಯರ್‌ಗೆ ಟಿಕೆಟ್ ನೀಡಲಾಗುವುದೆಂಬ ಮಾಹಿತಿ ಹರಿದಾಡುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಗ್ಯಾರಂಟಿ ಯೋಜನೆಗಳಿಂದಾಗಿ ಪ್ರಬಲವಾಗಿರುವ ಕಾಂಗ್ರೆಸ್ಸನ್ನು ಮಣಿಸಲು ಬಿಜೆಪಿ ರಾಜವಂಶಸ್ಥರ ಜನಪ್ರಿಯತೆಯ ಮೊರೆಹೋಗಿದೆ ಎನ್ನಲಾಗುತ್ತಿದೆ. ರಾಜವಂಶಸ್ಥರಿಗಾದರೆ ಪ್ರಬಲ ಮತ್ತು ಹಿಂದುಳಿದ ವರ್ಗಗಳ ಮತಗಳು ಭೇದವಿಲ್ಲದೇ ಹರಿದುಬರುತ್ತವೆ. ಇದರಿಂದ ಕಾಂಗ್ರೆಸ್ ಪಕ್ಷವನ್ನು ಸಿಎಂ ತವರಲ್ಲಿ ಕಟ್ಟಿಹಾಕಬಹುದೆಂಬ ಲೆಕ್ಕಾಚಾರಕ್ಕೆ ಪಕ್ಷದ ಹೈಕಮಾಂಡ್ ಬಂದಂತಿದೆ . ಇದೇ ಕಾರಣಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಸೂಚ್ಯವಾಗಿ ರಾಜವಂಶಸ್ಥರ ಪರ ಒಲವು ತೋರಿದ್ದಾರೆಂದೂ ಹೇಳಲಾಗುತ್ತಿದೆ.
ಹಾಸನದಲಿ ಕಾಂಗ್ರೆಸ್ ಗೆ ತರುವರೇ ಶೇಯಸ್
ಹಾಸನ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ. ಶ್ರೇಯಸ್ ಪಟೇಲ್(32) ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಹೈ ಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಒಮ್ಮತದಿಂದ ಆಯ್ಕೆಗೊಂಡಿದ್ದು ಶ್ರೇಯಸ್ ಪಟೇಲ್ ಹೆಸರು ಈಗ ಎಲ್ಲರ ಕುತೂಹಲ ಕೆರಳಿಸಿದೆ.
ಹಾಸನ ಜಿಲ್ಲಾ ಕಾಂಗ್ರೆಸ್ ನಲ್ಲಿನ ಹಲವು ಘಟಾನುಘಟಿ ಮುಖಂಡರನ್ನು ಹಿಂದಿಕ್ಕಿ ಟಿಕೆಟ್ ಗಳಿಸಿರುವ ಇವರು ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ. 6 ವರ್ಷವಿದ್ದಾಗಲೇ ತಂದೆಯನ್ನು ಕಳೆದುಕೊಂಡ ಶ್ರೇಯಸ್ , ತಮ್ಮ ತಾತ ಪುಟ್ಟಸ್ವಾಮಿಗೌಡ ಹಾಗೂ ತಾಯಿ ಅನುಪಮಾ ಅವರ ನೆರಳಿನಲ್ಲಿ ಬೆಳೆದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಸಡ್ಡು ಹೊಡೆದು ರಾಜಕೀಯ ಮಾಡುತ್ತಿದ್ದ ಜಿ.ಪುಟ್ಟಸ್ವಾಮಿಗೌಡ ಅವರ ನಿಧನದ ನಂತರ ಅವರ ಕುಟುಂಬ ರಾಜಕೀಯ ಶಕ್ತಿ ಕಳೆದುಕೊಂಡಿತ್ತು