ಬೆಂಗಳೂರು : ಹೊಸ ವರ್ಷ ಏನೋ ಬಂತು. ಆದರೆ ಕಣ್ಮರೆ ಆಗುತ್ತಿರುವ ಈ ದಿನಗಳು ಮರುಕಳಿಸುವುದಿಲ್ಲವೇ ಎಂದು ಮನಸ್ಸು ಮಿಡಿಯುತ್ತಿದೆ. ವರ್ಷವಿಡಿ ಅನುಭವಿಸಿದ ಸಂತೋಷ , ದುಃಖ, ನೆಮ್ಮದಿ ಒಂದೆಡೆಯಾದರೆ ಮುಂದಿನ ವರ್ಷ ಹೇಗಿರುತ್ತೋ ಯಾರು ಬಲ್ಲರು ಎನ್ನುವ ಆತಂಕ-ನಿರೀಕ್ಷೆ. ಹೊಸ ಶಕ್ತಿ, ಹುರುಪು, ಹೊಸ ದೃಷ್ಟಿಕೋನದೊಂದಿಗೆ ಮತ್ತೊಂದು ವರ್ಷವನ್ನು ಆಚರಿಸುವ ಸಡಗರವೂ ಹೌದು. ಇದೇ ಕಾರಣಕ್ಕೆ ಹೊಸ ವರ್ಷ ಎಂದರೆ ವಿಶ್ವದೆಲ್ಲದೆಡೆ ಸಂತಸ ಮನೆ ಮಾಡಿರುತ್ತದೆ.
ಆದರೂ ಕಳೆದು ಹೋದ ದಿನಗಳನ್ನು ನಮ್ಮೆದೆಯಾಳದಲ್ಲಿ ಮುಚ್ಚಿಡೋಣ. ಹೊಸದಾದ ಕ್ಯಾಲೆಂಡರ್ ಬಂದರೆ, ಹೊಸ ವರ್ಷ ಪ್ರಾರಂಭವಾಗುತ್ತದೆ. ನಾವೆಲ್ಲರೂ ಜೀವನದಲ್ಲಿ ಪ್ರತಿ ಕ್ಷಣವನ್ನುಆನಂದದಿಂದ ಅನುಭವಿಸಿದ್ದರೆ, ಪ್ರತಿ ದಿನವೂ ಹೊಸ ವರುÀವೇ ಆಗಿರುತ್ತೆ. ಆದರೆ ನಾವು ಮಾಡಿದ್ದ ಒಂದು ತಪ್ಪನ್ನು, ವರ್ಷವಿಡಿ ಮಾಡಬಾರದಿತ್ತು ಅಂತ ಕೊರಗುವುದರಲ್ಲೇ ಅರ್ಧ ವÀð ಹಾರಿ ಹೋಗಿರುತ್ತದೆ.
ವರ್ಷದಿಂದ ವರ್ಷಕ್ಕೆ ಕ್ಯಾಲೆಂಡರ್ ಹೇಗೆ ರೂಪಾಂತರಗೊಳ್ಳುತ್ತದೆಯೋ ಹಾಗೇ ನಾವು ಕೂಡ ಬದಲಾಗಬೇಕು. ಹಿಂದಿನ ವರ್ಷದ ನೆಮ್ಮದಿಯೊಂದಿಗೆ ಮುಂದಿನ ವರ್ಷವನ್ನು ಶುರು ಮಾಡಬೇಕು. ವರ್ಷ ಪೂರ್ತಿ ಯಾರೂ
ಸಂತೋಷದಿಂದ ಇರಲ್ಲ, ದುಃಖದಿಂದ ಇರಲ್ಲ. ಏಳು – ಬೀಳು,ಸುಖ – ದುಃಖ, ನೋವು- ನಲಿವು ಕಂಡಿರುತ್ತಾರೆ. ಆದರೆ ಅದರ ಬಗ್ಗೆ ಯೋಚನೆ ಮಾಡಬಾರದು. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು?.
ಒಂದು ವರ್ಷದಲ್ಲಿ ನಾವು ಹಾಕಿಕೊಂಡ ಯೋಜನೆಯಲ್ಲಿ ಎಷ್ಟು ಯಶಸ್ವಿಯಾಗಿವೆ, ಇನ್ನೂ ಎಷ್ಟು ಅರ್ಧದಲ್ಲಿ ನಿಂತಿವೆ,ಯಾರಿಗಾದರೂ ನನ್ನಿಂದ ನೋವಾಗಿದೆಯೇ, ಯಾರನ್ನು ನಿಂದಿಸಿದ್ದೀನಾ, ಅನ್ಯಾಯ ಮಾಡಿದ್ದೀನಾ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಯಾರನ್ನೂ ಅವಮಾನ ಮಾಡದೇ ನಮ್ಮ ಏಳಿಗೆಯೊಂದಿಗೆ ಮತ್ತೊಬ್ಬರ ಏಳಿಗೆಯನ್ನು ಬಯಸುವ ಕಾರ್ಯವಾಗಬೇಕು. ಒಂದು ವರ್ಷದಿಂದ ಆಗದಿರುವ ಕೆಲಸ ಈ ವರ್ಷ ಆಗಬಹುದು ಎಂಬ ಧನಾತ್ಮಕ ಮನೋಭಾವದಿಂದ ಕೆಲಸಗಳನ್ನು ಕೈಗೊಳ್ಳೋಣ. ಯಾವುದೇ ಕಾರಣಕ್ಕೂ ನನ್ನ ಗುರಿ ಬದಲಾಗಬಾರದು. ಯಾವ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೀನೊ
ಅದು ಕಷ್ಟವೋ ಅಥವಾ ಸರಳವಾಗಿದೆಯೋ ಯೋಚಿಸದೇ ಆ ಗುರಿ ತಲುಪುವದೆ ನನ್ನ ಛಲವಾಗಿರಬೇಕು. ಪ್ರತಿ ಬಾರಿಯೂ ದಾರಿ ಸುಲಭವಾಗಿದ್ದರೆ ಸಾಧನೆ ದೊಡ್ಡದಾಗುವುದಿಲ್ಲ. ಆದರೆ ಕಲ್ಲು – ಮುಳ್ಳುಗಳಿರುವ ದಾರಿಯಲ್ಲಿ ನಡೆದುಕೊಂಡು ಹೋದಾಗ ನಿಜವಾದ ಸಾಧನೆಯ ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಸಾಧ್ಯ.
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲ, ಧೈರ್ಯ, ಶ್ರದ್ಧೆ ನಮ್ಮಲ್ಲಿರಬೇಕು ಅಷ್ಟೇ . ಗುರಿಗಳನ್ನು ಬದಲಾಯಿಸುವ ಬದಲಾಗಿ, ಮಾರ್ಗವನ್ನು ಬದಲಾಯಿಸಿ ಸಾಕು, ಸಾಧನೆಯ ದೇಗುಲ ಸಮೀಪಿಸುತ್ತದೆ. ವರ್ಷದಿಂದ ವರ್ಷಕ್ಕೆ ಜನರೊಡನೆ ಒಡನಾಟ ಹೆಚ್ಚುತ್ತದೆ. ಅದನ್ನು ಗೌರವಿಸಿಕೊಂಡು ಮುನ್ನಡೆಯೋಣ. ಭೂಮಿಯ ಮೇಲಿನ ಪ್ರತಿ ಜೀವಿಯನ್ನು ಪ್ರೀತಿಸಿ. ಕೋಪವನ್ನು ಬದಿಗೊತ್ತಿ ಎಲ್ಲರನ್ನೂ ನಗುನಗುತ್ತಾ ಮಾತನಾಡಿಸಿ. ಬರುವಂತಹ ಜ್ವಲಂತ ಸವಾಲು, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ. ವರ್ಷ ಮುಗಿಯುವುದರೊಳಗೆ ಹೊಸ ವ್ಯಕ್ತಿಗಳಾಗಿ ಹೊರಬರೋಣ. ವರ್ಷ ಪೂರ್ತಿ ಹರ್ಷ ತುಂಬಿರಲಿ. 2024ಕ್ಕೆ ವಿದಾಯ ಹೇಳಿ, 2025ನ್ನು ಸ್ವಾಗತಿಸೋಣ.
ಗಂಗಾ ನೀಲಪ್ಪ ಅಮಾತೆಪ್ಪನವರ